ಕೊಪ್ಪಳ: ರಸ್ತೆ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಒದಗಿಸಲು ವಿಳಂಬ ಮಾಡಿದ ಕಾರಣಕ್ಕೆ ಸ್ಥಳೀಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ಆದೇಶದ ಮೇರೆಗೆ ಗುರುವಾರ, ಹಾವೇರಿ ಸಾರಿಗೆ ವಿಭಾಗದ ಬ್ಯಾಡಗಿ ಘಟಕದ ಸರ್ಕಾರಿ ಬಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಕುಷ್ಟಗಿ ತಾಲೂಕಿನ ಹನುಮಸಾಗರದ ದಾವಲ್‌ಬಿ ಅಬ್ದುಲ್‌ಸಾಬ್ ಹೊಸಮನಿ ಎಂಬವರು ಗ್ರಾಮದ ಇಳಕಲ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಬ್ಯಾಡಗಿ ಘಟಕದ ಬಸ್ ಡಿಕ್ಕಿಯಾಗಿ ಮೃತಪಟ್ಟಿದ್ದರು. 2016ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಹನುಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಸ್ಥಳೀಯ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿತ್ತು. ವಿಚಾರಣೆ ನಡೆಸಿದ ಕೋರ್ಟ್ ಮೃತ ವ್ಯಕ್ತಿಯ ಕುಟುಂಬಕ್ಕೆ 18.81 ಲಕ್ಷ ರೂ. ಪರಿಹಾರ ನೀಡುವಂತೆ ಬ್ಯಾಡಗಿ ಸಾರಿಗೆ ಘಟಕಕ್ಕೆ ಆದೇಶಿಸಿತ್ತು.
ಪರಿಹಾರ ನೀಡಲು ಸಾರಿಗೆ ಸಂಸ್ಥೆ ವಿಳಂಬ ತೋರಿದ್ದರಿಂದ ಕೋರ್ಟ್ ವಾರಂಟ್ ಹೊರಡಿಸಿ ಬಸ್ ಜಪ್ತಿ ಮಾಡಲು ಆದೇಶಿಸಿದೆ. ಹನುಮಸಾಗರ ಮಾರ್ಗವಾಗಿ ಬ್ಯಾಡಗಿಗೆ ತೆರಳುತ್ತಿದ್ದ ವೇಳೆ ಕೋರ್ಟ್ ಸಿಬ್ಬಂದಿಯು ಬಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಬಡ್ಡಿ ಇನ್ನಿತರ ಖರ್ಚು ಸೇರಿ ಒಟ್ಟು 21.48 ಲಕ್ಷ ರೂ. ಸಾರಿಗೆ ಸಂಸ್ಥೆ ಭರಿಸಬೇಕಿದೆ.
ಇತ್ತೀಚಿನ ಪ್ರಕರಣ- ದಾವಣಗೆರೆಯಲ್ಲಿ ಎರಡು ಬಸ್ ಜಪ್ತಿ: ಅಪಘಾತ ಪ್ರಕರಣವೊಂದರಲ್ಲಿ ಬಾಕಿ ಉಳಿದ ಪರಿಹಾರ ಮೊತ್ತ ನೀಡದೇ ಇದ್ದುದಕ್ಕೆ ನ್ಯಾಯಾಲಯದ ಆದೇಶದ ಮೇರೆಗೆ ಸೆ.11 ರಂದು ಎರಡು ವಾಯುವ್ಯ ಕರ್ನಾಟಕ ಸಾರಿಗೆ ಬಸ್‍ಗಳನ್ನು ಜಪ್ತಿ ಮಾಡಲಾಗಿತ್ತು. ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಹಾವೇರಿ ಡಿಪೋಗೆ ಸೇರಿದ ಎರಡು ಬಸ್‍ಗಳನ್ನು ನ್ಯಾಯಾಂಗ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿದ್ದರು. ಅಪಘಾತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೀಡಬೇಕಿದ್ದ ಪರಿಹಾರದ ಬಾಕಿ ಮೊತ್ತ ಉಳಿಸಿಕೊಂಡಿರುವ ಕೆಎಸ್ಆರ್ಟಿಸಿ ಸಂಸ್ಥೆಯ ಚರಾಸ್ತಿ ಜಪ್ತಿ ಮಾಡಲು ದಾವಣಗೆರೆ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‍ಸಿ ಕೋರ್ಟ್ ಆದೇಶ ಕೊಟ್ಟಿತ್ತು.
2013ರಲ್ಲಿ ತುಮಕೂರು ಟೋಲ್ ಬಳಿ ಹಾವೇರಿ ಡಿಪೋಗೆ ಸೇರಿದ ಸಾರಿಗೆ ಬಸ್ ಡಿಕ್ಕಿ ಹೊಡೆದು ಬೆಂಗಳೂರಿಗೆ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಂಜೀವ್ ಎಂ.ಪಾಟೀಲ್ ಸಾವನ್ನಪ್ಪಿದ್ದರು. ಪತ್ನಿ ಗೌರಿ ಪಾಟೀಲ್‍ಗೆ 2,82,42,885 (ಎರಡು ಕೋಟಿ 82 ಲಕ್ಷ, 42 ಸಾವಿರದ 885) ರೂಪಾಯಿ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಪರಿಹಾರ ಮೊತ್ತವನ್ನು ಪೂರ್ಣವಾಗಿ ನೀಡಲು ಸತಾಯಿಸುತ್ತಿರುವ ಕೆಎಸ್ಆರ್ಟಿಸಿ ಸಂಸ್ಥೆಯು ಈವರೆಗೆ 2.20 ಕೋಟಿ ರೂಪಾಯಿ ಮಾತ್ರ ಪಾವತಿ ಮಾಡಿತ್ತು. 2016ರ ನಂತರದ ಬಡ್ಡಿ ಮೊತ್ತ ಸೇರಿದಂತೆ ಇನ್ನೂ 1 ಕೋಟಿ ರೂಪಾಯಿಯನ್ನು ಮೃತರ ವಾರಸುದಾರರಿಗೆ ಸಾರಿಗೆ ಸಂಸ್ಥೆ ನೀಡಬೇಕು ಎಂದು ಗೌರಿ ಎಂಬವರ ತಂದೆ ಕಿರುವಾಡಿ ಸೋಮಶೇಖರ್ ತಿಳಿಸಿದ್ದರು.
ಇದನ್ನೂ ಓದಿ: ಉನ್ನತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಮಾತನಾಡಬೇಕು ಎಂದ ಹೈಕೋರ್ಟ್