ಕೊಪ್ಪಳ: ಉತ್ತಮವಾಗಿ ಬೆಳೆದಿದ್ದ ಎಲೆಕೋಸಿನ ಬೆಲೆ ಪಾತಾಳಕ್ಕಿಳಿದಿದ್ದು, ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಆತಂಕಗೊಂಡಿರುವ ರೈತರು ಬೆಳೆಯನ್ನು ಕಟಾವು ಮಾಡದೆ ಕುರಿಗಳನ್ನು ಮೇಯಿಸಲು ಬಿಟ್ಟಿದ್ದಾರೆ.
ಕೊಪ್ಪಳ ತಾಲೂಕಿನ ಚಿಲವಾಡಗಿ ಗ್ರಾಮ ತರಕಾರಿ ಬೆಳೆಯಲು ಪ್ರಸಿದ್ಧಿ ಹೊಂದಿದ್ದು, ಕೊಪ್ಪಳ ನಗರದಿಂದ ಕೇವಲ 5 ಕಿ.ಮೀ ದೂರದಲ್ಲಿದೆ. ಈ ಬಾರಿ ಚಿಲವಾಡಗಿ ಗ್ರಾಮವಷ್ಟೆ ಅಲ್ಲದೆ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಎಲೆಕೋಸು ಬೆಳೆಯನ್ನು ಬೆಳೆಯಲಾಗಿದೆ. ಆದರೆ ಬೆಲೆಯಲ್ಲಿ ಕುಸಿತ ಕಂಡಿದ್ದು, ಕೆಲ ರೈತರು ಬೆಳೆದಿರುವ ಎಲೆಕೋಸನ್ನು ಕಟಾವು ಮಾಡದೆ ಜಮೀನಿನಲ್ಲಿಯೇ ಹಾಗೆ ಬಿಟ್ಟಿದ್ದು, ಜಮೀನಿನಲ್ಲಿಯೇ ಕೊಳೆತು ಹೋಗುತ್ತಿವೆ. ಇನ್ನು ಕೆಲ ರೈತರು ಎಲೆಕೋಸು ಗೆಡ್ಡೆಗಳನ್ನು ಕುರಿಗಳಿಗೆ ತಿನ್ನಲು ಬಿಟ್ಟಿದ್ದಾರೆ.
ಒಂದು ಎಕರೆ ಎಲೆಕೋಸು ಬೆಳೆಯಲು ಸುಮಾರು 40 ಸಾವಿರ ರೂಪಾಯಿಗೂ ಹೆಚ್ಚು ಖರ್ಚಾಗುತ್ತದೆ. ಇನ್ನು 15 ಎಲೆಕೋಸು ಗೆಡ್ಡೆಗಳಿರುವ ಒಂದು ಚೀಲಕ್ಕೆ ಈಗ ಕೇವಲ 40 ರಿಂದ 50 ರೂ ಬೆಲೆ ಸಿಗುತ್ತಿದೆ. ಇದರಿಂದ ಬೆಳೆ ಬೆಳೆಯಲು ಮಾಡಿದ ಖರ್ಚು ಸಹ ಬರುವುದಿಲ್ಲ. ಹೀಗಾದರೆ ನಮ್ಮಂತಹ ರೈತರ ಗತಿ ಏನಾಗಬೇಕು ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.