ಕೊಪ್ಪಳ : ಲಾಕ್ಡೌನ್ ಹಿನ್ನೆಲೆ ರಾಜ್ಯ ಸರ್ಕಾರ ಕೆಲ ವರ್ಗಗಳಿಗೆ ಪ್ಯಾಕೇಜ್ ಘೋಷಣೆ ಮಾಡಿದೆ. ಇದರ ಜೊತೆಗೆ ಇನ್ನುಳಿದ ವರ್ಗಗಳಿಗೂ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಮಾಜಿ ಸಚಿವ ಶಿವರಾಜ ತಂಗಡಗಿ ಆಗ್ರಹಿಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಯೊಂದು ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ದಾರರಿಗೆ ಸರ್ಕಾರ ಹಣಕಾಸಿನ ನೆರವು ನೀಡಬೇಕು. ಬಿಪಿಎಲ್ ಕಾರ್ಡ್ದಾರರಿಗೆ ₹10 ಸಾವಿರ ಹಾಗೂ ಎಪಿಎಲ್ ಕಾರ್ಡ್ದಾರರಿಗೆ ₹5 ಸಾವಿರ ಅವರ ಖಾತೆಗೆ ಹಾಕಬೇಕು. ಕೇವಲ ಮನೆಯಲ್ಲಿರಿ.. ಮನೆಯಲ್ಲಿರಿ.. ಎಂದು ಹೇಳಿದರೆ ಸಾಲದು. ಪ್ರತಿದಿನ ಅಕ್ಕಿ, ಬೇಳೆ ತಿಂದು ಜೀವನ ಮಾಡೋಕಾಗುತ್ತಾ? ಕೊರೊನಾ ಗೆದ್ದಿದ್ದೇವೆ ಎಂದು ಸಂಭ್ರಮಪಡುವುದಲ್ಲ. ಈಗ ಅಸಲಿ ಅಗ್ನಿಪರೀಕ್ಷೆ ಶುರುವಾಗಿದೆ. ಜನರಿಗೆ ಸರ್ಕಾರ ನೆರವು ಒದಗಿಸಿ ಲಾಕ್ಡೌನ್ ಮುಂದುವರೆಸಿದರೆ ಒಳ್ಳೆಯದು ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಬಡವರು ಕಾಣಿಸುವುದಿಲ್ಲ. ಅವರಿಗೆ ಕಾರ್ಪೊರೇಟ್ ಕಂಪನಿಗಳು, ಶ್ರೀಮಂತರು ಕಾಣಿಸುತ್ತಾರೆ. ಈ ಹಿಂದೆ ವಿದೇಶದಲ್ಲಿದ್ದವರನ್ನು ಉಚಿತವಾಗಿ ವಿಮಾನದ ಮೂಲಕ ಕರೆತಂದರು. ಬಡವರು ತಮ್ಮೂರಿಗೆ ಹೋಗ್ತೀವಿ ಅಂದ್ರೆ ಮೂರುಪಟ್ಟು ಹಣ ಪಾವತಿಸಿ ತೆರಳಬೇಕೆಂದರು. ಪಕ್ಷದಿಂದ 1 ಕೋಟಿ ರೂ. ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ ಮೇಲೆ ಉಚಿತ ಮಾಡಿದರು ಎಂದರು.
2019ರಲ್ಲಿ ರಾಜ್ಯದ ಬೇರೆ ಬೇರೆ ಕಡೆ ನೆರೆ ಉಂಟಾಗಿತ್ತು. ಕೊಪ್ಪಳ ಜಿಲ್ಲೆಯಲ್ಲಿ ನೆರೆ ಬಾರದಿದ್ದರೂ ಅನುದಾನ ಬಂದಿತ್ತು. ಆದರೆ, ಅದು ಸದುಪಯೋಗವಾಗಬೇಕಾಗಿತ್ತು. ಆದರೆ, ಕನಕಗಿರಿ ಕ್ಷೇತ್ರದಲ್ಲಿ ಕಾಮಗಾರಿ ನಡೆಸದೇ ಕೋಟ್ಯಂತರ ರೂ. ಗುಳುಂ ಮಾಡಲಾಗಿದೆ. 78 ಕಾಮಗಾರಿಗಳಲ್ಲಿ ಒಂದೇ ಒಂದು ಕಾಮಗಾರಿ ಮಾಡದೇ ಸುಮಾರು ₹4 ಕೋಟಿಗೂ ಅಧಿಕ ಹಣ ಎತ್ತುವಳಿ ಮಾಡಲಾಗಿದೆ. ಇನ್ನು 1.90 ಕೋಟಿ ರೂ. ಬಿಲ್ ಎತ್ತುವಳಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕೆ ಕನಕಗಿರಿ ಶಾಸಕರ ಕುಮ್ಮಕ್ಕು ಇದೆ ಎಂದೆನಿಸುತ್ತದೆ. ಕಾಮಗಾರಿ ಮಾಡದೆ ಗುತ್ತಿಗೆದಾರರ ಹಾಗೂ ಎಇಇ ಮೇಲೆ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.