ಗಂಗಾವತಿ: ಅನಾರೋಗ್ಯಕ್ಕೀಡಾಗಿದ್ದ ವ್ಯಕ್ತಿಯೊಬ್ಬ ತಿನ್ನಲು ಆಹಾರ ಹಾಗೂ ಕುಡಿಯಲು ನೀರಿಲ್ಲದೆ ನರಳಿ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಮನೆಯವರಿಂದ ಹೊರ ದೂಡಲ್ಪಟ್ಟಿದ್ದ ಈ ವ್ಯಕ್ತಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಆರೈಕೆ ಸಿಗದೆ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ.
ನಗರದ ವಾರದ ಮಾರ್ಕೆಟ್ ಸಮೀಪದ ಚಿನಿವಾಲರ ಆಸ್ಪತ್ರೆಯ ಕಾಂಪೌಂಡ್ ಕಟ್ಟೆಯ ಮೇಲೆ ಕಳೆದ ಐದು ದಿನಗಳಿಂದ ಇದ್ದ ವ್ಯಕ್ತಿ ಸಾವನ್ನಪ್ಪಿದ್ದು, ಅನಾಥ ವ್ಯಕ್ತಿಯಂತೆ ಶವ ಸಂಸ್ಕಾರ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು, ನಗರಸಭೆ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿ ಸ್ಥಳದಿಂದ ತೆರಳಿದ್ದಾರೆ. ಈ ವಿಷಯವನ್ನು ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್, ನಗರಸಭೆ ಹಾಗೂ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಯಾರೂ ಕೂಡ ತಕ್ಷಣಕ್ಕೆ ಸ್ಪಂದಿಸದ ಹಿನ್ನೆಲೆ ವ್ಯಕ್ತಿ ನರಳಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ.
ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕಿದ್ದರೆ ಬದುಕಿ ಉಳಿಯುತ್ತಿದ್ದ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.