ಕೊಪ್ಪಳ: ಜಿಲ್ಲೆಯಲ್ಲಿ ಉಡಾನ್ ಯೋಜನೆ ಅನುಷ್ಠಾನಕ್ಕೆ ಖಾಸಗಿ ಏರ್ಪೋರ್ಟ್ ಬಳಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಎಂಎಸ್ಪಿಎಲ್ ಕಂಪನಿಯ ಪ್ರತಿನಿಧಿಗಳು ಷರತ್ತುಗಳೊಂದಿಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪರಿಶೀಲನೆ ನಡೆಸಿ ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದ್ದಾರೆ.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಉಡಾನ್ ಯೋಜನೆ ಅನುಷ್ಠಾನ ಮಾಡುವಂತೆ ಜಿಲ್ಲೆಯ ಸಂಘ ಸಂಸ್ಥೆಗಳು, ಸಾರ್ವಜನಿಕರ ಒತ್ತಾಸೆಯಾಗಿದೆ. ಈಗಾಗಲೇ ಸಂಘ ಸಂಸ್ಥೆಗಳ, ಸಾರ್ವಜನಿಕರೊಂದಿಗೆ ಸಭೆ ನಡೆಸಲಾಗಿದೆ. ತಾಲೂಕಿನ ಬಸಾಪುರ ಬಳಿ ಇರುವ ಎಂಎಸ್ಪಿಎಲ್ ಏರ್ಪೋರ್ಟ್ ಬಳಸಿಕೊಳ್ಳುವ ಕುರಿತಂತೆ ಈಗಾಗಲೇ ಸಭೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಭೆಯಲ್ಲಿ ಎಂಎಸ್ಪಿಎಲ್ನ ಪ್ರತಿನಿಧಿಗಳು ಭಾಗವಹಿಸಿ ಮಾ.5 ರಂದು ತಮ್ಮ ಷರತ್ತುಗಳ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದರಂತೆ ಅವರ ಪ್ರಸ್ತಾವನೆಯನ್ನು ಪರಿಶೀಲಿಸಿ ವಿವರವಾದ ಒಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚಿಗೆ ಜಿಲ್ಲೆಗೆ ಆಗಮಿಸಿದ್ದಾಗ ಸಂಸದರೊಂದಿಗೆ ಚರ್ಚಿಸಿದ್ದಾರೆ ಎಂದು ಹೇಳಿದರು.
ಕಂಪನಿಯ ಪ್ರತಿನಿಧಿಗಳು, ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಮುಂದಿನ ವಾರದಲ್ಲಿ ಇನ್ನೊಂದು ಸಭೆ ನಡೆಸಲಿದೆ. ಈಗ ಎಂಎಸ್ಪಿಎಲ್ ಕಂಪನಿಯ ಪ್ರತಿನಿಧಿಗಳು ನೀಡಿರುವ ಷರತ್ತುಗಳನ್ನು ಪರಿಶೀಲಿಸಿ ಯಾವುದು ಸಾಧ್ಯವೋ ಅದನ್ನು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ವಿವರಿಸಿದರು.