ಗಂಗಾವತಿ(ಕೊಪ್ಪಳ) : ಜಿಲ್ಲೆಯಲ್ಲಿ ಜಿಲ್ಲಾಡಳಿತದ ನಿರೀಕ್ಷೆ ಮೀರಿ ಸಮುದಾಯಕ್ಕೆ ಹರಡುತ್ತಿರುವ ಕೊರೊನಾವನ್ನು ಹೇಗಾದರೂ ಮಾಡಿ ಕಟ್ಟಿಹಾಕಬೇಕು ಎಂದು ನಿಶ್ಚಯಿಸಿರುವ ಜಿಲ್ಲಾಡಳಿತ ಇದೀಗ ಗಂಗಾವತಿ ನಗರದ 35 ವಾರ್ಡ್ಗಳಲ್ಲಿ ರ್ಯಾಪಿಡ್ ಟೆಸ್ಟ್ಗೆ ಮುಂದಾಗಿದೆ.
ಇಲ್ಲಿನ ಉಪ ವಿಭಾಗ ಆಸ್ಪತ್ರೆಯಲ್ಲಿ ತ್ವರಿತ ಪರೀಕ್ಷಾ ವಿಧಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್, ನಗರದಲ್ಲಿ ಕಾರ್ಯಾಚರಣೆ ನಡೆಸಲು ಒಟ್ಟು 15 ತಂಡ ರಚಿಸಲಾಗಿದೆ. ಪ್ರತಿ ತಂಡದಲ್ಲಿ ನಾಲ್ವರು ಸಿಬ್ಬಂದಿ ಇರಲಿದ್ದಾರೆ. ಪ್ರತಿ ನಾಲ್ಕು ತಂಡಕ್ಕೆ ಒಬ್ಬ ವೈದ್ಯ ಇದ್ದು, ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ರ್ಯಾಪಿಡ್ ಟೆಸ್ಟ್ ಸಂದರ್ಭದಲ್ಲಿ ಪಾಸಿಟಿವ್ ಕೇಸ್ ಪತ್ತೆಯಾದಲ್ಲಿ ಕೂಡಲೇ ಅವರಿಗೆ ಸಮುದಾಯದಿಂದ ಅಥವಾ ಜನ ಸಂಪರ್ಕದಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ಇಡಲು ವ್ಯವಸ್ಥೆ ಮಾಡಲಾಗುವುದು ಎಂದರು.
ರ್ಯಾಪಿಡ್ ಟೆಸ್ಟ್ನಲ್ಲಿ ಪಾಸಿಟಿವ್ ಕೇಸ್ ಪತ್ತೆಯಾದಲ್ಲಿ ತಕ್ಷಣ ಅವರನ್ನು ಐಸೋಲೇಶನ್ ಅಥವಾ ಕ್ವಾರಂಟೈನ್ ಮಾಡಿದ್ರೆ ಸೋಂಕು ಹರಡುವಿಕೆಯ ಪ್ರಮಾಣ ತಗ್ಗಿಸಬಹುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ನ ಸಿಇಒ ರಘುನಂದನ್ ಮೂರ್ತಿ, ತರಬೇತಿ ಐಎಎಸ್ ಅಧಿಕಾರಿ ಪನರ್ತ್ ವರ್ಣೇಕರ್ ಇದ್ದರು.