ಕೊಪ್ಪಳ: ಜಿಲ್ಲೆಯಾದ್ಯಂತ ಮಳೆ ಇಲ್ಲದೆ ಬೆಳೆದಿರುವ ಬೆಳೆಗಳು ಒಣಗಲಾರಂಬಿಸಿವೆ. ಅಲ್ಪಸ್ವಲ್ಪ ಉಳಿದುಕೊಂಡಿರುವ ಬೆಳೆ ಉಳಿಸಿಕೊಳ್ಳಲು ಬಡ ರೈತನೊಬ್ಬ ಬಿಂದಿಗೆ ಹಿಡಿದು ನೀರುಣಿಸುತ್ತಿದ್ದಾರೆ. ಜಿಲ್ಲೆಯ ಕುಕನೂರ ತಾಲೂಕಿನ ಯರೇಹಂಚಿನಾಳ ಗ್ರಾಮದ ರೈತನ ಸಂಕಷ್ಟ ಇದು.
ಯರೇಹಂಚಿನಾಳ ಗ್ರಾಮದ ಬಸವರಡ್ಡೆಪ್ಪ ಹನಸಿ ಎಂಬವರು ತನ್ನ ಎರಡು ಎಕರೆ ಜಮೀನಿನಲ್ಲಿ ಮೆಣಿಸಿನಕಾಯಿ ಬೆಳೆದಿದ್ದಾರೆ. ಸಕಾಲಕ್ಕೆ ಮಳೆ ಬಾರದೇ ಒಣಗಲಾರಂಭಿಸಿವೆ. ಇದನ್ನು ಕಂಡು ಹೊಟ್ಟೆ ಪಾಡಿಗೆ ಅಳಿದುಳಿದ ಬೆಳೆಯನ್ನಾದರೂ ಉಳಿಸಿಕೊಳ್ಳೋಣ ಎಂದು ಪ್ರತಿದಿನ ಕೆರೆಯಿಂದ ಬಿಂದಿಗೆಯಲ್ಲಿ ನೀರು ಹೊತ್ತು ತಂದು ನೀರುಣಿಸುತ್ತಿದ್ದಾರೆ.
ಈಗಾಗಲೇ ಮುಂಗಾರು ಕೈ ಕೊಟ್ಟು ಬೆಳೆ ಯಾವುದೂ ಆಗಿಲ್ಲ. ಇದೀಗ ಹಿಂಗಾರು ಮಳೆಯೂ ಆಗದೆ ಬೆಳೆ ಕೈತಪ್ಪಿ ಹೋಗುತ್ತಿದೆ. ಕಳೆದೆರಡು ತಿಂಗಳ ಹಿಂದೆಯೇ ರಾಜ್ಯ ಸರಕಾರ ಬರ ಘೋಷಣೆ ಮಾಡಿದೆ. ಆದರೆ, ಇಲ್ಲಿಯವರೆಗೂ ಒಂದು ರೂಪಾಯಿ ಪರಿಹಾರ ನಮ್ಮ ಖಾತೆಗೆ ಬಂದಿಲ್ಲ. ಎರಡು ತಿಂಗಳ ಹಿಂದೆ ಮಾಡಿದ ನರೇಗಾ ಕೂಲಿಯನ್ನೂ ಸರಕಾರ ಇನ್ನೂ ಕೊಟ್ಟಿಲ್ಲ. ಇವರನ್ನು ನಂಬಿರುವ ರೈತರ ಹೊಟ್ಟೆಗೆ ತಣ್ಣಿರಬಟ್ಟೆಯೇ ಗತಿ. ಆದಷ್ಟು ಬೇಗ ಸರಕಾರ ಬರ ಪರಿಹಾರ ನೀಡಬೇಕು. ರೈತರಿಗೆ ನರೇಗಾ ಯೋಜನೆಯಡಿ ಕೆಲಸ ನೀಡಬೇಕು. ಈಗಿರುವ ಕೂಲಿಗಿಂತ ಹೆಚ್ಚಿನ ಹಣ ನೀಡಿ ಬಡವರ ಬದುಕಿಗೆ ಆಸರೆಯಾಗಬೇಕು ಎಂದು ರೈತ ಸಂಘದ ಅಧ್ಯಕ್ಷ ಅಂದಪ್ಪ ಕೋಳೂರ ಒತ್ತಾಯಿಸಿದರು.
ಇದನ್ನೂ ಓದಿ: 'ನಮಗೆ ತಲುಪುತ್ತಿಲ್ಲ ನೀರು': ದಾವಣಗೆರೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಬವಣೆ
ಮುಂಗಾರು ಮಳೆ ಮೇಲೆ ಭರವಸೆ ಇಟ್ಟುಕೊಂಡು ಸಾಲ ಮಾಡಿ ಹೆಸರು, ಶೇಂಗಾ, ಮೆಕ್ಕೆಜೋಳ ಸೇರಿದಂತೆ ಇನ್ನಿತರ ಬೆಳೆಗಳನ್ನು ಎಕರೆಗೆ ಸುಮಾರು 20 ಸಾವಿರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದೇವೆ. ಆದರೆ, ಮಳೆ ಸಕಾಲಕ್ಕೆ ಬರದೆ ಬಿತ್ತಿದ ಬೆಳೆ ಬತ್ತಿ ಹೋಯಿತು. ಮುಂದೆ ಮುಂಗಾರು ಬೆಳೆಯಾದರೂ ನಮ್ಮ ಕೈ ಹಿಡಿದೀತು ಎಂಬ ಭರವಸೆಯಲ್ಲಿದ್ದೆವು. ಹಿಂಗಾರು ಕೂಡಾ ಕೈ ಕೊಟ್ಟಿದೆ. ಇದರಿಂದಾಗಿ ಮಳೆಯಾಶ್ರಿತ ರೈತರು ಆತಂಕಕ್ಕೀಡಾಗಿದ್ದಾರೆ. ಸರಕಾರ ನಮ್ಮ ಕೈ ಹಿಡಿಯದಿದ್ದರೆ ಮುಂದೇನು ಎಂದು ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ರೈತ ಬಸವರೆಡ್ಡಿ ಹನಸಿ ಅಳಲು ತೋಡಿಕೊಂಡರು.
ಇದನ್ನೂ ಓದಿ: ಟೊಮೆಟೊ ಲಾಭ ಗಳಿಕೆ ಕಂಡು ಹೊಟ್ಟೆಕಿಚ್ಚು.. ಹತ್ತಿಗೆ ಕಳೆನಾಶಕ ಸಿಂಪಡನೆ ಮಾಡಿದ ಕಿಡಿಗೇಡಿಗಳು: ರೈತನ ಆರೋಪ