ಕುಷ್ಟಗಿ: ತಾಲೂಕಿನ ಹನುಮಸಾಗರ ಹಾಗೂ ಹನುಮನಾಳ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಕೊರತೆ ಕಾರಣ ಹೆಸರು ಬೆಳೆ ಕಮರುತ್ತಿರುವ ಹಿನ್ನೆಲೆ ಇಂದು ಸಂಸದ ಕರಡಿ ಸಂಗಣ್ಣ ಭೇಟಿ ನೀಡಿ ಪರಿಶೀಲಿಸಿದರು.
ಜಾಗೀರಗುಡದೂರು ಗ್ರಾಮದ ರೈತ ಮುತ್ತಣ್ಣ ಹನುಮಸಾಗರ ಎಂಬುವರ 8 ಎಕರೆ ಪ್ರದೇಶದಲ್ಲಿ ಒಣಗಿದ ಸ್ಥಿತಿಯಲ್ಲಿದ್ದ ಹೆಸರು ಬೆಳೆಯನ್ನು ಪರಿಶೀಲಿಸಿದರು. ಬಳಿಕ ಮಳೆ ಕೊರತೆಯಿಂದ ಆಗುತ್ತಿರುವ ವ್ಯಾಪಕ ಬೆಳೆ ಹಾನಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ದೊರಕಿಸಲು ಪ್ರಯತ್ನಿಸುವ ಭರವಸೆ ನೀಡಿದರು. ಮಳೆ ಕೊರತೆಯಿಂದ ತಾಲೂಕಿನ ಹೆಸರು ಬೆಳೆ ಸ್ಥಿತಿ ಬಗ್ಗೆ ವರದಿ ನೀಡಲು ಕೃಷಿ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಹೆಸರು ಬಿತ್ತನೆ ಕ್ಷೇತ್ರ ಎಷ್ಟು?: ತಾಲೂಕಿನ ಹನುಮನಾಳ ಹೋಬಳಿ ವ್ಯಾಪ್ತಿಯಲ್ಲಿ 1,557 ಗುರಿಯಲ್ಲಿ 1,150 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಹನುಮಸಾಗರ ಹೋಬಳಿ ವ್ಯಾಪ್ತಿಯಲ್ಲಿ 1,750 ಹೆಕ್ಟೇರ್ ಗುರಿಯಲ್ಲಿ 1,250 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ನಾಗನಗೌಡ ಪಾಟೀಲ ಮಾಹಿತಿ ನೀಡಿದರು.
ರೈತರು ಏನಂತಾರೆ?: ಸದ್ಯ ಹೆಸರು ಬೆಳೆ ಹೂವಾಡುವ ಹಾಗೂ ಕಾಯಿ ಕಟ್ಟುವ ಹಂತದಲ್ಲಿದ್ದು, ಮಳೆ ಕೊರತೆಯಾಗಿ ಬಾಡುವ ಸ್ಥಿತಿಯಲ್ಲಿದೆ. ಮಳೆ ಕೊರತೆಯಿಂದ ಹೂ ಉದುರಿದರೆ ಇಳುವರಿಗೆ ಎಳ್ಳುನೀರು ಬಿಡಬೇಕಾಗುತ್ತದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದರು.