ಗಂಗಾವತಿ: ಹತ್ತನೇ ತರಗತಿಯ ಪೂರಕ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಯೊಬ್ಬನಿಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆ ಸೋಮವಾರ ನಡೆದ ಗಣಿತ ಪರೀಕ್ಷೆಗೆ ಆ ವಿದ್ಯಾರ್ಥಿಗೆ ಪ್ರತ್ಯೇಕವಾದ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಯಿಸಲಾಯಿತು.
ಮಲ್ಲಾಪುರ ಗ್ರಾಮದ ಹತ್ತನೇ ತರಗತಿ ವಿದ್ಯಾರ್ಥಿ ಕಳೆದ ಹಲವು ದಿನಗಳಿಂದ ಸಾಧಾರಣ ಕೊರೊನಾ ಲಕ್ಷಣ ಹೊಂದಿದ್ದು, ಗಂಟಲು ಪರೀಕ್ಷೆ ಮಾಡಿಸಿಕೊಂಡ ಹಿನ್ನೆಲೆ ಭಾನುವಾರ ಕೋವಿಡ್ ಪಾಸಿಟಿವ್ ಇರುವ ಬಗ್ಗೆ ದೃಢಪಟ್ಟಿದೆ. ಈಗಾಗಲೆ ವಿದ್ಯಾರ್ಥಿ ಹೋಂ ಐಸೋಲೇಷನ್ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.
ಸೋಮವಾರದ ಪರೀಕ್ಷೆಗಾಗಿ ಆ ವಿದ್ಯಾರ್ಥಿಗೆ ಮನೆಯಿಂದಲೇ ನೇರವಾಗಿ ಆ್ಯಂಬುಲೆನ್ಸ್ ವಾಹನದ ವ್ಯವಸ್ಥೆ ಮಾಡಿ, ಜಯನಗರದ ಬೈಪಾಸ್ ರಸ್ತೆಯಲ್ಲಿರುವ ಕೋವಿಡ್ ಸೆಂಟರ್ಗೆ ಕರೆದೊಯ್ದು, ಪರೀಕ್ಷೆ ಬರೆಯಿಸಲಾಯಿತು. ಬಳಿಕ ಮತ್ತೆ ಮನೆಗೆ ಕರೆದುಕೊಂಡು ಹೋಗಿ ಬಿಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ತಿಳಿಸಿದ್ದಾರೆ.