ಗಂಗಾವತಿ: ಆಂಡ್ರಾಯ್ಡ್ ಫೋನ್ನಿಂದಲೇ ಜನರಲ್ಲಿ ಕೋವಿಡ್ ಹರಡುವಿಕೆ ಭಯ ಮತ್ತು ಆತಂಕದ ಪ್ರಮಾಣ ಹೆಚ್ಚಾಗುತ್ತಿದೆ. ಆದ್ದರಿಂದ ದಯವಿಟ್ಟು ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಂಡ್ರಾಯ್ಡ್ ಫೋನ್ ಬಳಕೆ ನಿಷೇಧ ಮಾಡಬೇಕು.
ಹೀಗೊಂದು ಸಲಹೆಯನ್ನು ಕನಕಗಿರಿ ಶಾಸಕ ಬಸವರಾಜ ದಡೇಸಗೂರು ಉಪ ವಿಭಾಗ ಆಸ್ಪತ್ರೆಯ ವೈದ್ಯರ ಮುಂದೆ ಇರಿಸಿದ್ದಾರೆ. ಅಲ್ಲದೇ ಈ ಸಂಬಂಧ ಬೇಕಿದ್ದರೆ ಜಿಲ್ಲಾಧಿಕಾರಿ ಮೂಲಕ ಆದೇಶ ಹೊರಡಿಸಲು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಕೋವಿಡ್ಗೆ ಒಳಗಾದ ರೋಗಿಗಳು ಸಾಮಾಜಿಕ ಜಾಲತಾಣದಲ್ಲಿ ಬರುವ ಚಿತ್ರ ವಿಚಿತ್ರ ವದಂತಿಗಳನ್ನು ನೋಡಿಯೇ ಹೆಚ್ಚು ಆತಂಕಗೊಂಡು ಆರೋಗ್ಯದಲ್ಲಿ ಏರುಪೇರು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ದಯವಿಟ್ಟು ನೀವು (ವೈದ್ಯರು) ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಂಡ್ರಾಯ್ಡ್ ಫೋನ್ ಬಳಕೆಗೆ ಅವಕಾಶ ಮಾಡಿಕೊಡಬೇಡಿ. ಟಿವಿಯಲ್ಲಿನ ಸುದ್ದಿಗಳನ್ನು ತೋರಿಸಬೇಡಿ. ಅಗತ್ಯವಿದ್ದರೆ ಕೀ ಪ್ಯಾಡ್ ಫೋನ್ ಬಳಸಲಿ ಎಂದು ಶಾಸಕರು ಸಲಹೆ ನೀಡಿದರು.
ವೈದ್ಯರಿಗೆ ಕೈ ಮುಗಿದು ಮನವಿ:
ಕೋವಿಡ್ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಯಿಂದ ಗಂಗಾವತಿ ಆಸ್ಪತ್ರೆಗೆ ಬರುವ ಕಾರಟಗಿ, ಕನಕಗಿರಿ ಭಾಗದ ಜನರಿಗೆ ಒಳ್ಳೆಯ ಚಿಕಿತ್ಸೆ ನೀಡಿ ಎಂದು ಶಾಸಕ ಬಸವರಾಜ ದಡೇಸಗೂರು ವೈದ್ಯರಿಗೆ ಕೈ ಮುಗಿದು ಮನವಿ ಮಾಡಿದರು.
ಇಡೀ ಜಿಲ್ಲೆಯಲ್ಲಿಯೇ ಗುಣಮಟ್ಟದ ಚಿಕಿತ್ಸೆ ಹಾಗೂ ಬಡವರಿಗೆ ಉತ್ತಮ ಸೇವೆ ಸಿಗುತ್ತಿರುವ ಹಿನ್ನೆಲೆ ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಬರುವ ರೋಗಿಗಳ ಪ್ರಮಾಣ ಸಹಜವಾಗಿ ಹೆಚ್ಚಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಕೋವಿಡ್ ವಾರ್ಡ್ಗೆ ದಾಖಲಾಗುತ್ತಿರುವ ರೋಗಿಗಳಿಗೆ ಆಸ್ಪತ್ರೆಯವರು ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಮೂಲಕ ಗಮನ ಸೆಳೆದಿದ್ದಾರೆ.
ರೋಗಿಗಳಿಗೆ ಒಂದು ಕಿಟ್ ಕೊಡುತ್ತಿದ್ದು, ಊಟದ ತಟ್ಟೆ, ಪೇಸ್ಟ್, ಟೂಥ್ ಬ್ರಶ್, ಸೋಪು, ಕುಡಿಯುವ ನೀರಿನ ಬಾಟಲ್ ಸೇರಿದಂತೆ ಉತ್ತಮ ಪೌಷ್ಟಿಕ ಆಹಾರ ನೀಡುತ್ತಿದ್ದಾರೆ. ಮಧ್ಯಾಹ್ನ ಹಣ್ಣಿನ ರಸ ನೀಡುವ ಮೂಲಕ ಉತ್ತಮ ಚಿಕಿತ್ಸೆ, ಆತಿಥ್ಯ ನೀಡುತ್ತಿದ್ದಾರೆ.
ಅನ್ನ, ಚಪಾತಿ, ಪಲ್ಯ, ಬೇಳೆಕಾಳು, ಮೊಟ್ಟೆ, ಬಾಳೆಹಣ್ಣು ಊಟಕ್ಕೆಂದು ರೋಗಿಗಳಿಗೆ ನೀಡಲಾಗುತ್ತಿದೆ. ಇಷ್ಟು ಸೌಲಭ್ಯ ಮನೆಯಲ್ಲೂ ಸಿಗದು. ಇಲ್ಲಿನ ಆಸ್ಪತ್ರೆಯ ವೈದ್ಯ ಹಾಗೂ ಸಿಬ್ಬಂದಿ ಪರಿಶ್ರಮದಿಂದ ಉತ್ತಮ ಗುಣಮಟ್ಟದ ಸೇವೆ ಸಿಗುತ್ತಿದೆ ಎಂದು ಶಾಸಕರು ಪ್ರಶಂಸೆ ವ್ಯಕ್ತಪಡಿಸಿದರು.