ಕೊಪ್ಪಳ: ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಕೊರೊನಾ ವಾರಿಯರ್ಸ್ ತಮ್ಮ ವೈಯಕ್ತಿಕ ನೋವು ನಲಿವುಗಳನ್ನು ಮರೆತು ಸೇವೆಯಲ್ಲಿ ತೊಡಗಿದ್ದಾರೆ.
ಕೊಪ್ಪಳದ ಕಿಮ್ಸ್ನಲ್ಲಿ ಕಳೆದ 6 ವರ್ಷಗಳಿಂದ ನರ್ಸಿಂಗ್ ಆಫೀಸರ್ ಆಗಿ ಕೆಲಸ ಮಾಡುತ್ತಿರುವ ಮಂಜುನಾಥ ಘಾಡಿ ಅವರ ಹೆಂಡತಿಗೆ ಏಪ್ರಿಲ್ 1 ರಂದು ಹೆರಿಗೆಯಾಗಿದ್ದು,ಗಂಡು ಮಗು ಜನಿಸಿದೆ. ಹೆರಿಗೆಯಾಗಿರುವ ತಮ್ಮ ಪತ್ನಿ ಹಾಗೂ ಮಗುವನ್ನು ನೋಡಲೂ ಹೋಗದೆ ಕೋವಿಡ್ ಡ್ಯೂಟಿ ಮಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದವರಾದ ಮಂಜುನಾಥ ಘಾಡಿ ಅವರ ಪತ್ನಿಗೆ ಬಾಗಲಕೋಟೆ ಜಿಲ್ಲೆಯ ಕಮತಗಿಯ ತವರು ಮನೆಯಲ್ಲಿ ಹೆರಿಗೆಯಾಗಿದೆ. ಈಗ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಪಾಸಿಟಿವ್ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಹೀಗಾಗಿ ಪತ್ನಿ ಹಾಗೂ ಮಗುವನ್ನು ನೋಡಲು ಹೋಗದೆ ಮಂಜುನಾಥ್ ಘಾಡಿ ಅವರು ಕೋವಿಡ್ ವಾರ್ಡ್ನಲ್ಲಿ ಕರ್ತವ್ಯ ಮಾಡುತ್ತಿದ್ದಾರೆ.
ಪತ್ನಿ, ಮಗಳು ಹಾಗೂ ಕಳೆದ ತಿಂಗಳು ಜನಿಸಿರುವ ಮಗುವನ್ನು ನೋಡಬೇಕಿನಿಸಿದಾಗ ವಿಡಿಯೋ ಕಾಲ್ ಮಾಡಿ ನೋಡಿ ಖುಷಿಪಡುತ್ತಾರೆ. ಈಗ ಕೊರೊನಾ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವುದರಿಂದ ನಾನು ಅಲ್ಲಿಗೆ ಹೋಗುವುದು ಸಹ ಸರಿಯಲ್ಲ. ಸೇವೆಯ ಜೊತೆಗೆ ಮಗು ಹಾಗೂ ಬಾಣಂತಿಗೆ ಇನ್ಫೆಕ್ಷನ್ ಆಗಬಾರದು ಎಂಬ ಕಾಳಜಿಯಿಂದ ಪತ್ನಿ ಹಾಗೂ ಮಗುವನ್ನು ನೋಡಲು ಹೋಗುತ್ತಿಲ್ಲ. ಮಗುವನ್ನು ನೋಡಬೇಕು ಎಂಬ ಆಸೆಯಾಗುತ್ತದೆಯಾದರೂ ಸಹ ಇದು ಸಂದರ್ಭವಲ್ಲ. ಹೀಗಾಗಿ ಕೊರೊನಾ ಸೋಂಕು ಕಡಿಮೆಯಾಗುವರೆಗೂ ಮಗು ನೋಡಲು ಹೋಗದೆ ಸೇವೆ ಸಲ್ಲಿಸಲು ನಿರ್ಧರಿಸಿದ್ದೇನೆ ಎನ್ನುತ್ತಾರೆ ಮಂಜುನಾಥ ಘಾಡಿ.