ಗಂಗಾವತಿ: ತಮ್ಮ ಜೀವ ಪಣಕ್ಕಿಟ್ಟು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಕೊರೊನಾ ಸಂದರ್ಭದಲ್ಲಿ ಹೋರಾಡಿದ್ದರಿಂದಲೇ ಇಂದು ಈ ವ್ಯಾಧಿ ನಿಯಂತ್ರಣದಲ್ಲಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಶ್ಲಾಘಿಸಿದರು.
ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ತಾಲೂಕು ಸೌಹಾರ್ದ ಸಹಕಾರಿ ಒಕ್ಕೂಟ ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್ಸ್ ಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಕೊರೊನಾ ಮಾರಣಾಂತಿಕ ಎಂದು ಗೊತ್ತಿದ್ದರೂ ತಮ್ಮ ಜೀವದ ಹಂಗು ತೊರೆದು ಜನರ ಪ್ರಾಣ ಕಾಪಾಡಲು ಈ ವಾರಿಯರ್ಸ್ ಶ್ರಮಿಸಿದ್ದಾರೆ. ಇಂದಿಗೂ ಕೊರೊನಾ ಪಾಸಿಟಿವ್ ಬಂದಿರುವ ಪ್ರದೇಶಗಳಲ್ಲಿ ಇವರು ಓಡಾಡಿ ಮಾಹಿತಿ ಸಂಗ್ರಹಿಸಿ ಕಾಲಕಾಲಕ್ಕೆ ಸಂಬಂಧಿತ ಇಲಾಖೆಗೆ ರವಾನಿಸುತ್ತಿದ್ದಾರೆ. ಈ ಮೂಲಕ ಜನರು ಮತ್ತು ಇಲಾಖೆಯ ಮಧ್ಯೆ ಸಂಪರ್ಕ ಸೇತುವೆಯಾಗಿ ಸೇವೆ ಸಲ್ಲಿಸುವ ಮೂಲಕ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರೊನಾ ವಾರಿಯರ್ಸ್ ಪ್ರಾಮಾಣಿಕ ಸೇವೆಯಿಂದಲೇ ಇಂದು ಕೊರೊನಾ ರಾಜ್ಯದಲ್ಲಿ ನಿಯಂತ್ರಣದಲ್ಲಿದೆ. ಇಲ್ಲವಾದಲ್ಲಿ ಲಕ್ಷಾಂತರ ಜನರು ಮಹಾಮಾರಿಗೆ ತುತ್ತಾಗಬೇಕಿತ್ತು ಎಂದರು.
ಈ ವೇಳೆ ತಲಾ ಮೂರು ಸಾವಿರ ಮೊತ್ತದ ಪ್ರೋತ್ಸಾಹ ಧನವನ್ನು 85 ಕೊರೊನಾ ವಾರಿಯರ್ಸ್ ಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಒಕ್ಕೂಟ ಹಾಗೂ ಪ್ರಾಥಮಿಕ ಕೃಷಿ ಬ್ಯಾಂಕಿನ ಹಲವು ಮುಖಂಡರು ಉಪಸ್ಥಿತರಿದ್ದರು.