ಕುಷ್ಟಗಿ (ಕೊಪ್ಪಳ): ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಕೋವಿಡ್ ಕೇರ್ ಸೆಂಟರ್ಗೆ ಹೋಗಲು, ಆ್ಯಂಬ್ಯುಲೆನ್ಸ್ಗೆ ಪರದಾಡಿದ ಪ್ರಸಂಗ ಬೆಳಕಿಗೆ ಬಂದಿದೆ.
ಕುಷ್ಟಗಿ ತಾಲೂಕಿನ ಮೇಗೂರು ಗ್ರಾಮ ವ್ಯಕ್ತಿಯೊಬ್ಬ, ಮುದೇನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಂಟಲು ದ್ರವ ಮಾಡಿಸಿಕೊಂಡಿದ್ದರು. ಮೇಗೂರು ಗ್ರಾಮದಲ್ಲಿದ್ದ ಅವರಿಗೆ ಆಸ್ಪತ್ರೆಯಿಂದ ಕೊರೊನಾ ಪಾಸಿಟಿವ್ ಇದ್ದು ಮುದೇನೂರಿಗೆ ಬರಲು ತಿಳಿಸಿದ್ದಾರೆ. ಹೀಗಾಗಿ ಮೇಗೂರಿನಿಂದ ಮುದೇನೂರಿಗೆ 4 ಕಿ.ಮೀ. ಕಾಲ್ನಡಿಗೆಯ ಮೂಲಕ ತೆರಳಿದ್ದಾರೆ.
ಮುದೇನೂರು ಆಸ್ಪತ್ರೆಯಲ್ಲಿ ಆ್ಯಂಬ್ಯುಲೆನ್ಸ್ ಕಾಯುತ್ತ ಕುಳಿತಿದ್ದ ಅವರಿಗೆ, ಪುನಃ ಮೊಬೈಲ್ ಕರೆ ಬಂದಿದ್ದು, ಆ್ಯಂಬ್ಯುಲೆನ್ಸ್ ನಾರಿನಾಳ ಗ್ರಾಮಕ್ಕೆ ಹೋಗಿ ಅಲ್ಲಿನ ಪಾಸಿಟಿವ್ ರೋಗಿಯನ್ನು ಕರೆ ತರುವುದು ತಡವಾಗುತ್ತಿದೆ. ಹಾಗಾಗಿ, ಊರಲ್ಲಿಯೇ ಇರು ಎಂದು ತಿಳಿಸಿದ್ದಾರೆ. ವಿಧಿ ಇಲ್ಲದೇ ಪುನಃ ಮುದೇನೂರ ಗ್ರಾಮದಿಂದ ಮೇಗೂರು ಕಡೆ ದಾರಿ ಹಿಡಿದಿದ್ದಾರೆ.
ಆ ವೇಳೆ ಪತ್ರಕರ್ತ ತಿರುಪತಿ ಎಲಿಗಾರ ಎಂಬುವವರು ಎದುರಿಗೆ ಬಂದಾಗ ನಿಜ ಸ್ಥಿತಿ ವಿವರಿಸಿ, ಹಸಿವು, ಬಾಯಾರಿಕೆಯಾಗಿದೆ ಎಂದು ತಿಳಿಸಿದ್ದಾನೆ. ಕೂಡಲೇ ಆತನನ್ನು ನೆರಳಿನಲ್ಲಿ ನಿಲ್ಲಿಸಿ, ನೀರು, ಉಪಹಾರ ನೀಡಿ ಉಪಚರಿಸಿ ತಿರುಪತಿ ಮಾನವೀಯತೆ ಮೆರೆದಿದ್ದು, ಧೈರ್ಯದಿಂದ ಇರುವಂತೆ ಆತ್ಮಸ್ಥೈರ್ಯ ಮೂಡಿಸಿದ್ದಾರೆ. ಇನ್ನು ಪಾಸಿಟಿವ್ ಬಂದ ವ್ಯಕ್ತಿಯನ್ನು ಆರೋಗ್ಯ ಸಿಬ್ಬಂದಿ ನಡೆಸಿಕೊಂಡ ರೀತಿಗೆ ಶಪಿಸುವಂತಾಗಿದೆ.