ಕೊಪ್ಪಳ : ದೀಕ್ಷಾ ನಾಟ್ಯ ಅಕಾಡೆಮಿ ಸಂಘಟಕತ್ವದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾರ್ಚ್ 27ರಂದು ನಿರೂಪಕಿ ಅನುಶ್ರೀ ಹಾಗೂ ಕಾಮಿಡಿ ಕಿಲಾಡಿಗಳ ತಂಡ ಭಾಗವಹಿಸುತ್ತಿದ್ದ ಕೊಪ್ಪಳ ಹಬ್ಬ ಹೆಸರಿನ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮ ರದ್ದಾಗಿದೆ.
ಕೊರೊನಾ 2ನೇ ಅಲೆಯ ಭೀತಿ ಕಾರಣ ಜಿಲ್ಲಾಡಳಿತ ಕಾರ್ಯಕ್ರಮ ರದ್ದುಪಡಿಸುವಂತೆ ಆದೇಶ ಮಾಡಿದ್ದು, ಸಂಘಟಕರು ಕಂಗಾಲಾಗುವಂತೆ ಮಾಡಿದೆ. ಕಾರ್ಯಕ್ರಮದ ಹಿನ್ನೆಲೆ ಸಂಘಟಕರು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದರು. ಕಾರ್ಯಕ್ರಮ ನಡೆಯಬೇಕಿದ್ದ ಜಿಲ್ಲಾ ಕ್ರೀಡಾಂಗಣದ ಬಾಡಿಗೆ ಪಾವತಿ, ಕಲಾವಿದರಿಗೆ ಸಂಭಾವನೆ ಹಾಗೂ ಸ್ಟೇಜ್ ಅಡ್ವಾನ್ಸ್ ಸಹ ನೀಡಿದ್ದರಂತೆ.
ನಾಳೆ ಕಾರ್ಯಕ್ರಮ ಇದೆ ಅನ್ನೋವಾಗಲೇ ಇಂದು ಜಿಲ್ಲಾ ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಕಾರ್ಯಕ್ರಮ ನಡೆಸದಂತೆ ಆದೇಶ ಮಾಡಿರೋದು ಸಂಘಟಕರ ಸಂಕಟ ಹೆಚ್ಚಳಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ನವ ವೃಂದಾವನದ ಗಡ್ಡೆಯ ಯತಿಗಳ ಸಮಾಧಿ ರಕ್ಷಣೆಗೆ ಸೇಫ್ಟಿ ಗ್ರೀಲ್ ಅಳವಡಿಕೆ
ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ. ದಯವಿಟ್ಟು ಕಾರ್ಯಕ್ರಮ ನಡೆಸಲು ಅವಕಾಶ ಕೊಡಿ ಎಂದು ಪರಿಪರಿಯಾಗಿ ಬೇಡಿದರೂ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಈಗಾಗಲೇ ಕಾರ್ಯಕ್ರಮದ ಟಿಕೆಟ್ ಮಾರಾಟ ಮಾಡಲಾಗಿದೆ.
ಈಗ ಟಿಕೆಟ್ ಖರೀದಿ ಮಾಡಿದವರಿಗೆ ನಾವು ಏನು ಹೇಳಬೇಕು, ಏನು ಮಾಡಬೇಕು ಎಂಬುದು ದಿಕ್ಕು ತೋಚದಂತಾಗಿದೆ ಎಂದು ಸಂಘಟಕರು ಅಳಲು ತೋಡಿಕೊಂಡಿದ್ದಾರೆ. ಇನ್ನು, ಕಾರ್ಯಕ್ರಮ ರದ್ದಾಗಿರುವ ವಿಷಯ ತಿಳಿದು ಟಿಕೆಟ್ ಖರೀದಿಸಿದವರು ಕಾರ್ಯಕ್ರಮ ಸಂಘಟಕರ ಬಳಿ ಬಂದು ವಿಚಾರಿಸುತ್ತಿದ್ದಾರೆ.