ಕೊಪ್ಪಳ: ನಗರದಲ್ಲಿ ಸುಮಾರು 8 ವರ್ಷಗಳಿಂದ ವಾಜಪೇಯಿ ನಗರ ವಸತಿ ಯೋಜನೆಯ 2000 G+1 ಮನೆಗಳ ನಿರ್ಮಾಣ ನನೆಗುದಿಗೆ ಬಿದ್ದಿದೆ. ಯಾಕಾಗಿ ಹೀಗಾಯಿತು ಎಂಬ ಅಸಲಿ ಕಾರಣ ಅಚ್ಚರಿಯಾಗುವಂತಹದ್ದು.
ಹೌದು.., ಉದ್ದೇಶಿತ ಯೋಜನೆಯ ಭೂಮಿ ಎನ್ಎ ಆಗಿ ಇನ್ನೂ ಪರಿವರ್ತನೆಯಾಗಿಲ್ಲ ಎನ್ನಲಾಗಿದೆ. ಯಾವುದೇ ಒಂದು ಭೂಮಿಯನ್ನು ವಸತಿ ಪ್ರದೇಶವನ್ನಾಗಿ ಮಾಡಲು ಭೂಮಿ ಪರಿವರ್ತನೆ ಮಾಡಬೇಕಾಗಿರುವುದು ಮೊಟ್ಟಮೊದಲ ಕೆಲಸ. ಆದರೆ, ಸರ್ಕಾರಿ ವಸತಿ ಯೋಜನೆಗೆ ಬಳಕೆಯಾಗುವ ಅದೆಷ್ಟೋ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆ ಮಾಡಿರುವುದಿಲ್ಲ ಅನ್ನೋದೆ ಈ ವಿಳಂಬಕ್ಕೆ ಕಾರಣ ಎನ್ನಲಾಗಿದೆ.
2012-13 ರ ಸಂದರ್ಭದಲ್ಲಿ ಅಂದಿನ ವಸತಿ ಸಚಿವರಾಗಿದ್ದ ವಿ. ಸೋಮಣ್ಣ ಅವರ ಅಧಿಕಾರದ ಅವಧಿಯಲ್ಲಿ ಕೊಪ್ಪಳ ನಗರದ ಹಿರೇಸಿಂಧೋಗಿ ರಸ್ತೆಯಲ್ಲಿ ನಿವೇಶನ ರಹಿತ, ವಸತಿ ರಹಿತ ನಗರವಾಸಿಗಳಿಗೆ ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ 2000 G+1 ಮನೆಗಳ ನಿರ್ಮಾಣ ಯೋಜನೆ ಕೈಗೊಳ್ಳಲಾಯಿತು. ಅದಕ್ಕೆ ಬೇಕಾದ ಭೂಮಿಯನ್ನು ಸಹ ಖರೀದಿಸಿ ಕಾಮಗಾರಿಯನ್ನೂ ಆರಂಭಿಸಲಾಯಿತು.
ಆದರೆ, ಆ ಭೂಮಿ ಈವರೆಗೂ ಸಹ ಕೃಷಿಯೇತರ ಭೂಮಿಯಾಗಿ ಪರಿವರ್ತನೆಯಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿಯೇ ಇಲ್ಲಿ 2000 ಮನೆಗಳ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. 30 ಸಾವಿರ ರೂಪಾಯಿ ಫಲಾನುಭವಿಗಳ ವಂತಿಗೆ ಹಣ, ಸರ್ಕಾರದ ಸಹಾಯಧನ ಹಾಗೂ ಬ್ಯಾಂಕ್ನಿಂದ ಸಾಲ ಯೋಜನೆಯ ಹಣದೊಂದಿಗೆ ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರತಿ ಮನೆಯ ನಿರ್ಮಾಣ ಯೋಜನೆ ಕೈಗೊಳ್ಳಲಾಗಿತ್ತು.