ಕೊಪ್ಪಳ : ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಕಲ್ಪನೆಯನ್ನು ಕಾಂಗ್ರೆಸ್ ಪಕ್ಷ ಸಾಕಾರಗೊಳಿಸುವ ನಿಟ್ಟಿನಲ್ಲಿ ಅಧಿಕಾರದ ವಿಕೇಂದ್ರೀಕರಣದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದಿತು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.
ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿ ಅವರು ಗ್ರಾಪಂ,ತಾಪಂ ಹಾಗೂ ಜಿಪಂಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಗಾಂಧೀಜಿ ಅವರು ಕಂಡ ಗ್ರಾಮ ಸ್ವರಾಜ್ ಕಲ್ಪನೆಗೆ ಕಾಯಕಲ್ಪ ನೀಡಿದರು ಎಂದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಈವರೆಗೆ ಸುಮಾರು ₹3 ಸಾವಿರ ಕೋಟಿ ಅನುದಾನ ತಂದು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದೇವೆ. ಮೆಡಿಕಲ್ ಕಾಲೇಜು, ಆಸ್ಪತ್ರೆ, ಬ್ರಿಡ್ಜ್, ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ರೆ ರೈತರಿಗೆ ಶಾಶ್ವತವಾಗಿ ಅನುಕೂಲವಾಗುತ್ತದೆ ಎಂಬ ಕಲ್ಪನೆ ನಮಗೆ ಇದೆ. ಆದರೆ, ಬಿಜೆಪಿ ಪಕ್ಷ ಧರ್ಮ, ಜಾತಿ- ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಅನುದಾನ ನೀಡಿಲ್ಲ. ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟ ಮೇಲೆ ಈ ಸರ್ಕಾರ ಒಂದೇ ಒಂದು ಪೈಸೆ ಅನುದಾನ ಕೊಟ್ಟಿಲ್ಲ.
ಉದ್ಯೋಗ ಕೊಡುತ್ತೇವೆ ಎಂದವರು ಉದ್ಯೋಗ ನೀಡಿಲ‌್ಲ. ಕಪ್ಪು ಹಣವನ್ನು ತಂದು ₹15 ಲಕ್ಷ ಜನರ ಅಕೌಂಟ್ಗೆ ಹಾಕುತ್ತೇವೆ ಎಂದವರು, 15 ರೂ.ಸಹ ಹಾಕಿಲ್ಲ. ರೈಲ್ವೆ ಸೇರಿದಂತೆ ಅನೇಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ದೂರಿದರು.
ಅಂಬಾನಿ ಕುಟುಂಬದಲ್ಲಿ ಜನಿಸಿದ ಮಗು ನೋಡಲು ಪ್ರಧಾನಿ ನರೇಂದ್ರ ಮೋದಿ ಹೋದರು. ಆದರೆ, ರೈತರು ಹೋರಾಟ ಮಾಡುತ್ತಿದ್ದರೂ ಸಹ ಅಲ್ಲಿ ಮೋದಿ ಹೋಗಿಲ್ಲ. ಜನರು ಜಾಗೃತರಾಗಬೇಕು. ನೂತನವಾಗಿ ಆಯ್ಕೆಯಾಗಿರುವ ಸದಸ್ಯರು ಗ್ರಾಮದ ಅಭಿವೃದ್ಧಿ ಕೆಲಸ ಮಾಡಬೇಕು.
ನಿಮ್ಮನ್ನು ಮಾರಾಟ ಮಾಡಿಕೊಳ್ಳಬೇಡಿ. ನಿಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಆ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಗ್ರಾಮಗಳ ಅಭಿವೃದ್ಧಿ ಮಾಡಬೇಕು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.