ಕೊಪ್ಪಳ: ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರ ಪಟ್ಟಿಯಲ್ಲಿನ ಗೊಂದಲ ಕುರಿತು ನಾನು ಹೈಕೋರ್ಟ್ ಮೆಟ್ಟಿಲೇರಿದ್ದೇನೆ. ಶುಕ್ರವಾರದ ವೇಳೆಗೆ ವಿಚಾರಣೆಗೆ ಬರುವ ಸಾಧ್ಯತೆ ಇದ್ದು, ನನ್ನ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ ಎಂದು ಸಾಮಾಜಿಕ ಹೋರಾಟಗಾರ, ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ರಾಜಶೇಖರ್ ಮುಲಾಲಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಕಸಾಪ ಮತದಾರರ ಪಟ್ಟಿಯಲ್ಲಿ ಗೊಂದಲವಿದೆ. ಸುಮಾರು 20 ಸಾವಿರ ಮತದಾರರು ತೀರಿದ್ದರೂ ಸಹ ಅವರ ಹೆಸರು ಇನ್ನೂ ಮತದಾರರ ಪಟ್ಟಿಯಲ್ಲಿದೆ. ಸ್ವತಃ ಚಿದಾನಂದಮೂರ್ತಿ ಅವರ ಶ್ರದ್ಧಾಂಜಲಿ ಸಭೆಯನ್ನು ಕಸಾಪ ಕಚೇರಿಯಲ್ಲಿಯೇ ಮಾಡಿದ್ದರೂ ಅವರ ಹೆಸರು ಇನ್ನೂ ಮತದಾರರ ಪಟ್ಟಿಯಲ್ಲಿದೆ. ಈ ಬಗ್ಗೆ ನಾನು ಆಕ್ಷೇಪಣೆ ಸಲ್ಲಿಸಿದ್ದೆ.
ಸರಿಯಾದ ಸ್ಪಂದನೆ ಸಿಗದ ಹಿನ್ನೆಲೆ ಹೈಕೋರ್ಟ್ ಮೆಟ್ಟಿಲೇರಿರುವೆ. ಶುಕ್ರವಾರದ ವೇಳೆಗೆ ವಿಚಾರಣೆ ನಡೆದು ಹೈಕೋರ್ಟ್ ತೀರ್ಪು ಬರುವ ಸಾಧ್ಯತೆ ಇದೆ. ಇನ್ನು ಖೊಟ್ಟಿ ಮತದಾನ ಆಗುವ ಸಾಧ್ಯತೆ ಇದ್ದು, ಚುನಾವಣೆ ತಡೆ ಹಿಡಿಯಬೇಕು. ಪರಿಷ್ಕರಣೆಯಾಗಬೇಕು ಹಾಗೂ ಕೊರೊನಾ ಇರುವುದರಿಂದ ಚುನಾವಣೆ ಮುಂದೂಡಬೇಕು ಎಂಬ ಅಂಶಗಳೊಂದಿಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವೆ ಎಂದರು.
ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಶಿಕ್ಷಕರ, ರೈತ ಹಾಗೂ ಯುವ ಸಾಹಿತಿ ಘಟಕ ಸ್ಥಾಪನೆಯ ಉದ್ದೇಶವಿದೆ. ಚುನಾವಣೆ ಹಿನ್ನೆಲೆ ಈಗಾಗಲೇ ನಾನು ರಾಜ್ಯಾದ್ಯಂತ ಸಂಚರಿಸಿರುವೆ. ಉತ್ತಮ ಸ್ಪಂದನೆ ಸಿಕ್ಕಿದೆ. ಕಸಾಪದ 105 ವರ್ಷಗಳ ಇತಿಹಾಸದಲ್ಲಿ ಮಂಡ್ಯ, ಮೈಸೂರು ಮೂಲದವರು ಹೆಚ್ಚು ಬಾರಿ ಅಧ್ಯಕ್ಷರಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದವರಿಗೆ ಅವಕಾಶ ಸಿಗಬೇಕಿದೆ. ನಮ್ಮ ಭಾಗದ ಮತದಾರರು ಈ ಭಾಗದ ಅಭ್ಯರ್ಥಿಗಳಿಗೆ ಮತ ನೀಡಬೇಕು. ಆ ಭಾಗದ ಅಭ್ಯರ್ಥಿಗಳಿಗೆ ಮತ ನೀಡಬೇಡಿ ಎಂದು ಹೇಳುತ್ತೇನೆ. ಯುವಕರಿಗೆ ಅವಕಾಶ ನೀಡಿ ಅದರಲ್ಲೂ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದೇವೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಬೆಡ್ಗೆ ಪರದಾಟ, ಚಿತಾಗಾರದಲ್ಲೂ 'ಹೆಣ'ಗಾಟ: ಬೆಂಗಳೂರಿನಲ್ಲಿ ಪರಿಸ್ಥಿತಿ ಗಂಭೀರ
ಕೊರೊನಾ ಇರುವ ಹಿನ್ನೆಲೆ ಮತದಾರರನ್ನು ತಲುಪಲು ಆಗುತ್ತಿಲ್ಲ. ಬಹಳ ಅಭ್ಯರ್ಥಿಗಳ ಬೇಡಿಕೆ ಚುನಾವಣೆ ಮುಂದೂಡಬೇಕು ಎನ್ನುವುದು. ಒಂದು ವೇಳೆ ಚುನಾವಣೆ ನಡೆದರೆ ಮತದಾರರು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತೇನೆ. ರಾಜ್ಯದಲ್ಲಿ ಸುಮಾರು 3 ಸಾವಿರ ಕನ್ನಡ ಸಂಘಟನೆಗಳಿದ್ದು 2 ಸಾವಿರಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ನನ್ನನ್ನು ಬೆಂಬಲಿಸುತ್ತಾರೆ ಎಂದು ಮುಲಾಲಿ ಹೇಳಿದರು.