ಗಂಗಾವತಿ: ಕೇವಲ ಆರುತಿಂಗಳ ಹಿಂದಷ್ಟೆ ಪ್ರೀತಿಸಿ ವಿವಾಹವಾಗಿದ್ದ ವ್ಯಕ್ತಿ ಬೈಕ್ನಲ್ಲಿ ತನ್ನ ಪತ್ನಿಯೊಂದಿಗೆ ಅಂಜನಾದ್ರಿಗೆ ಬರುವ ವೇಳೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಗಂಗಾವತಿ ತಾಲೂಕಿನ ಸಣಾಪುರ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಕೊಪ್ಪಳ ವಡ್ಡರೋಣಿಯ ಎಗ್ರೈಸ್ ವ್ಯಾಪಾರಿ ಶಿವಕುಮಾರ ರಾಮಣ್ಣ ಕುಣಿಕೇರಿ ಎಂದು ಗುರುತಿಸಲಾಗಿದೆ. ಇದೇ ಘಟನೆಯಲ್ಲಿ ಮೃತ ಶಿವಕುಮಾರನ ಪತ್ನಿ ಚೈತ್ರಾ ಗಂಭಿರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಪ್ಪಳದಿಂದ ಸಣಾಪುರ ಮಾರ್ಗವಾಗಿ ಅಂಜನಾದ್ರಿಗೆ ಬರುವ ಸಂದರ್ಭದಲ್ಲಿ ಸಣಾಪುರದ ದಿಬ್ಬದ ಸಮೀಪ ಸಾರಿಗೆ ಇಲಾಖೆಯ ವಾಹನ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಮೃತನ ಸಂಬಂಧಿ ಮಂಜುನಾಥ ಎಂಬುವವರು ನೀಡಿದ ದೂರಿನ ಮೇರೆಗೆ ಸಾರಿಗೆ ಇಲಾಖೆಯ ಟಿಪ್ಪು ಸುಲ್ತಾನ ಎಂಬುವವರ ಮೇಲೆ ದೂರು ದಾಖಲಾಗಿದೆ.
ಮೃತ ಶಿವಕುಮಾರ ಕಳೆದ ಹಲವು ವರ್ಷದಿಂದ ಪ್ರೀತಿಸುತ್ತಿದ್ದ ಅನ್ಯ ಜಾತಿಯ ಚೈತ್ರಾ ಎಂಬ ಯುವತಿಯನ್ನು ಮನೆವರನ್ನು ಒಪ್ಪಿಸಿ ಕೇವಲ ಆರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದು, ಅಂಜನಾದ್ರಿ ದರ್ಶನಕ್ಕೆ ಬರುವ ಸಂದರ್ಭದಲ್ಲಿ ವಿಧಿ ಮೃತ್ಯುವಾಗಿ ಕಾಡಿರುವುದು ಸೋಜಿಗ ಎನಿಸಿದೆ.
ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ: ಓರ್ವ ವ್ಯಕ್ತಿ, ಎತ್ತು ಸಾವು