ಗಂಗಾವತಿ (ಕೊಪ್ಪಳ): ತಾಲ್ಲೂಕಿನ ಆನೆಗೊಂದಿ ಸಮೀಪ ಇರುವ ಪ್ರಸಿದ್ಧ ಧಾರ್ಮಿಕ ತಾಣ ಅಂಜನಾದ್ರಿ ಪರ್ವತಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಭೇಟಿ ನೀಡಲಿದ್ದು, ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವರು. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ 120 ಕೋಟಿ ರೂ ಅನುದಾನದಲ್ಲಿ ವಸತಿ ಸಮುಚ್ಛಯ, ರೋಪ್‌ವೇ ಸೇರಿದಂತೆ ಅಗತ್ಯ ಸೌಲಭ್ಯಗಳ ನಿರ್ಮಾಣದ ಕಾಮಗಾರಿಗಳು ಇಲ್ಲಿ ನಡೆಯಲಿವೆ.
ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೊರಟು 10.30ಕ್ಕೆ ಗಿಣಿಗೇರಾದ ಏರ್ಸ್ಟ್ರಿಪ್‌ಗೆ ಸಿಎಂ ಆಗಮಿಸುವರು. ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಆನೆಗೊಂದಿ ಉತ್ಸವ ವೇದಿಕೆಯ ಹೆಲಿಪ್ಯಾಡ್ಗೆ ಬಂದು, ಅಲ್ಲಿಂದ ರಸ್ತೆಯ ಮೂಲಕ ಅಂಜನಾದ್ರಿ ಬೆಟ್ಟ ತಲುಪುವ ಸಿಎಂ ಬಸವರಾಜ ಬೊಮ್ಮಾಯಿ, ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಆ ಬಳಿಕ ಅಲ್ಲಿಂದ ನೇರವಾಗಿ ರಸ್ತೆ ಮೂಲಕ ಗಂಗಾವತಿಗೆ ಆಗಮಿಸಲಿದ್ದಾರೆ. ಗಂಗಾವತಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ವಿವಿಧ ಇಲಾಖೆಯ ಫಲಾನುಭವಿಗಳ ಸಮಾವೇಶದಲ್ಲಿ ಭಾಗಿಯಾಗಿ ಹಕ್ಕುಪತ್ರ ವಿತರಣೆ ಮಾಡುವ ಸಿಎಂ ಅಲ್ಲಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ತವರು ಕ್ಷೇತ್ರ ಶಿಗ್ಗಾಂವಿಗೆ ತೆರಳಲಿದ್ದಾರೆ.
ಬಜೆಟ್ನಲ್ಲಿ ₹100 ಕೋಟಿ ಘೋಷಣೆ: ಈಗಾಗಲೇ ಅಂಜನಾದ್ರಿ ಬೆಟ್ಟವನ್ನು ಧಾರ್ಮಿಕ ಕ್ಷೇತ್ರವಾಗಿ ಹಾಗೂ ಪ್ರವಾಸಿ ತಾಣವಾಗಿ ಅಭಿವೃದ್ದಿ ಮಾಡಲು ಮಾಸ್ಟರ್ ಪ್ಲಾನ್ ಅನ್ನು ರಾಜ್ಯ ಸರ್ಕಾರ ರೂಪಿಸಿದೆ. ಈ ನಿಟ್ಟಿನಲ್ಲಿ 2023-24ನೇ ಸಾಲಿನ ಮಂಗಡಪತ್ರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ 100 ಕೋಟಿ ರೂಪಾಯಿ ಘೋಷಣೆ ಮಾಡಿದ್ದರು. ಅಗತ್ಯ ಮೂಲ ಸೌಕರ್ಯ ನಿರ್ಮಾಣ, ವಸತಿ ಸಮುಚ್ಚಯ ನಿರ್ಮಾಣ, ಸ್ನಾನಘಟ್ಟ, ಶೌಚಾಲಯ, ವಾಣಿಜ್ಯ ಸಂಕೀರ್ಣ ಸೇರಿದಂತೆ ನಾನಾ ಉದ್ದೇಶಿತ ಕಾಮಗಾರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಈಗಾಗಲೇ ಕೊಪ್ಪಳ ತಾಲೂಕಿನ ಹಿಟ್ನಾಳ್ ಕ್ರಾಸ್ನಿಂದ ಗಂಗಾವತಿ ಸಾಯಿಬಾಬಾ ದೇವಸ್ಥಾನದವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಪ್ರವಾಸಿ ಆಕರ್ಷಣೆಯಾಗಿ ಆಂಜನಾದ್ರಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ, ಥೀಮ್ ಪಾರ್ಕ್ ನಿರ್ಮಾಣದಂತಹ ಯೋಜನೆ ರೂಪಿಸಲಾಗಿದೆ.
ರೈತರಿಗೆ ನೋಟಿಸ್: ವಸತಿ, ವಾಣಿಜ್ಯ, ಶೌಚಾಲಯ, ವಾಹನ ಪಾರ್ಕಿಂಗ್ನಂತಹ ಕಾಮಗಾರಿಗೆ ಅಗತ್ಯ ಜಮೀನು ಖರೀದಿಗೆ ಮುಂದಾಗಿರುವ ಸರ್ಕಾರ, ಈಗಾಗಲೇ ರೈತರಿಗೆ ಭೂ ಸ್ವಾಧೀನ ಕಾರ್ಯ ನಡೆಸುತ್ತಿದೆ. ಅದಕ್ಕೆ ಸಂಬಂಧಸಿ ರೈತರಿಗೆ ನೋಟಿಸ್ ಜಾರಿ ಮಾಡಿದೆ. ಈ ಮಧ್ಯೆ ಇದೀಗ ಸಿಎಂ ಬೊಮ್ಮಾಯಿ ಅಂಜನಾದ್ರಿ ಅಭಿವೃದ್ದಿಗೆ ಎರಡನೇ ಹಂತದಲ್ಲಿ ಬಜೆಟ್ನಲ್ಲಿ ನೂರು ಕೋಟಿ ಅನುದಾನ ನೀಡಿರುವುದು ಸಹಜವಾಗಿ ಹನುಮನ ಭಕ್ತರ ಸಂತಸಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ವಿಶ್ವದರ್ಜೆಯ ತಾಣಕ್ಕಾಗಿ ಬಜೆಟ್ನಲ್ಲಿ ಅಂಜನಾದ್ರಿಗೆ ಮತ್ತೆ ನೂರು ಕೋಟಿ ಘೋಷಣೆ.. ಆ ಭಾಗದಲ್ಲಿ ಸಂತಸದ ಹೊನಲು!