ಗಂಗಾವತಿ: ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದರೂ ನಗರದ ಕೆಲ ಬಟ್ಟೆ ವ್ಯಾಪಾರಿಗಳು ಹಿಂಬಾಗಿಲಿನ ಮೂಲಕ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ನಗರದ ಮಹಾವೀರ ವೃತ್ತ, ಸಿಬಿಎಸ್ ಸರ್ಕಲ್, ಓಲ್ಡ್ ಓಎಸ್ಬಿ ರಸ್ತೆಯಲ್ಲಿರುವ ಹತ್ತಾರು ಬಟ್ಟೆ ಅಂಗಡಿಗಳ ಪ್ರಭಾವಿ ಮಾಲೀಕರು ಮುಖ್ಯ ರಸ್ತೆಯಲ್ಲಿರುವ ತಮ್ಮ ಅಂಗಡಿ ಹಾಗೂ ಮಳಿಗೆಗಳ ಮುಂಬಾಗಿಲು ಬಂದ್ ಮಾಡಿದ್ದಾರೆ. ಆದರೆ, ಬಹುತೇಕರು ಹಿಂಬಾಗಿಲಿನ ಮೂಲಕ ವ್ಯವಹಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಗ್ರಾಹಕರನ್ನು ಅಂಗಡಿಯ ಹಿಂಬಾಗಿಲ ಮೂಲಕ ಒಳಗೆ ಬಿಟ್ಟುಕೊಂಡು ಬಾಗಿಲು ಹಾಕಿ ವ್ಯವಹಾರ ಮಾಡುವುದು, ಬಳಿಕ ಅವರನ್ನು ಹೊರಕ್ಕೆ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ.
ಓದಿ : ಕೊಪ್ಪಳದಲ್ಲಿ 412 ಪಾಸಿಟಿವ್ ಪ್ರಕರಣಗಳು ಪತ್ತೆ, 7 ಸಾವು
ಕದ್ದುಮುಚ್ಚಿ ನಡೆಸಲಾಗುತ್ತಿರುವ ಈ ವ್ಯಹಾರಕ್ಕಾಗಿ ಜನ ಗಂಟೆಗಟ್ಟಲೆ ಅಂಗಡಿ ಸಮೀಪ ಕಾದು ನಿಂತು ಬಟ್ಟೆ ಖರೀದಿಸಿಕೊಂಡು ಹೋಗುತ್ತಿದ್ದಾರೆ. ಮನೆಯಲ್ಲಿ ಶುಭ ಸಮಾರಂಭಗಳಿಗೆ ಹೊಸ ಬಟ್ಟೆ ಅಗತ್ಯ ಇರುವುದನ್ನೇ ವ್ಯಾಪಾರಿಗಳು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಪೊಲೀಸರ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡುತ್ತಿದ್ದಾರೆ.