ಗಂಗಾವತಿ: ಸಾಕು ಪ್ರಾಣಿಗಳಲ್ಲಿ ನಾಯಿ ಎಂದರೆ ಬಹುತೇಕರಿಗೆ ಅಚ್ಚುಮೆಚ್ವು. ವಿಶ್ವಾಸಕ್ಕೆ ಮತ್ತೊಂದು ಹೆಸರೇ ಈ ಪ್ರಾಣಿ. ಆದರೆ ಇಲ್ಲೊಂದು ನಾಯಿ ಸೃಷ್ಟಿಸಿದ ಅವಾಂತರಕ್ಕೆ 14 ಜನ ಗಾಯಗೊಂಡಿದ್ದಾರೆ.
ಕನಕಗಿರಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ಮುಧೋಳ ತಳಿಯ ಸಾಕುನಾಯಿಯೊಂದರ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಅಷ್ಟೇ ಅಲ್ಲ, 14 ಜನರಿಗೆ ಗಾಯ ಹಾಗೂ 57 ಜನರ ಮೇಲೆ ದೂರಿಗೆ ಕಾರಣವಾಗಿದೆ.
ವಿವರ: ಬಂಕಾಪುರ ಗ್ರಾಮದ ಸೂಜಿ ನರಿಯಪ್ಪ ಗೊಲ್ಲರ್ ಎಂಬುವರು ಸಾಕಿದ್ದ ಮುಧೋಳ ತಳಿಯ ನಾಯಿ ಅದೇ ಗ್ರಾಮದ ಬೀರಪ್ಪ ಬುರಡಿ ಎಂಬುವರ ಜಮೀನಿಗೆ ನುಗ್ಗಿದೆ. ಇದು ಎರಡು ಕುಟುಂಬಗಳ ನಡುವೆ ಹೊಡೆದಾಟಕ್ಕೆ ಕಾರಣವಾಗಿದೆ. ಮೊದಲೇ ಈ ಎರಡು ಕುಟುಂಬದ ಮಧ್ಯೆ ಸಂಬಂಧ ಅಷ್ಟಕ್ಕಷ್ಟೇ ಎಂಬಂತಿತ್ತು ಎಂದು ತಿಳಿದುಬಂದಿದೆ. ಆದರೆ ನಾಯಿ ಜಮೀನಿಗೆ ನುಗ್ಗಿದ ವಿಚಾರ ಮುನ್ನೆಲೆಗೆ ಬಂದು ದೊಡ್ಡ ಗಲಾಟೆೆಯೇ ನಡೆದಿದೆ.
ನಾಯಿಯ ವಿಷಯವಾಗಿ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ. ಈ ಘಟನೆಯಲ್ಲಿ 14 ಜನ ಗಾಯಗೊಂಡಿದ್ದು, ಗಂಗಾವತಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ಬಣದ 57 ಜನರ ವಿರುದ್ಧ ದೂರು ದಾಖಲಾಗಿದೆ.
ಸದ್ಯ ಗ್ರಾಮದಲ್ಲಿ ಜಿಲ್ಲಾ ಸಶಸ್ತ್ರ ವಾಹನ ಮತ್ತು ಪೊಲೀಸರ ತಂಡ ಬೀಡುಬಿಟ್ಟಿದೆ.
ಇದನ್ನೂ ಓದಿ: ಜಂಟಿ ಅಧಿವೇಶನಕ್ಕಾಗಿ ಗ್ರ್ಯಾಂಡ್ ಸ್ಟೆಪ್ಸ್ ಮೂಲಕ ವಿಧಾನಸೌಧಕ್ಕೆ ರಾಜ್ಯಪಾಲರ ಪ್ರವೇಶ