ಗಂಗಾವತಿ(ಕೊಪ್ಪಳ): ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಜೆಡಿಎಸ್ ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಆರ್ಪಿಪಿ) ಗಂಗಾವತಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಹಮ್ಮಿಕೊಂಡಿದ್ದ ರೋಡ್ ಶೋ ಸಂದರ್ಭದಲ್ಲಿ ಮಕ್ಕಳನ್ನು ಬಳಸಿಕೊಂಡ ಆರೋಪದ ಮೇಲೆ ನಗರ ಠಾಣೆಯಲ್ಲಿ ಎರಡೂ ಪಕ್ಷದ ಅಧ್ಯಕ್ಷರ ವಿರುದ್ಧ ದೂರು ದಾಖಲಾಗಿದೆ. ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಶೇಖ್ ನಭಿಸಾಬ್ ಮತ್ತು ಕೆಆರ್ಪಿಪಿ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷ ಮನೋಹರ ಗೌಡ ಹೇರೂರು ಅವರ ಮೇಲೆ ಚುನಾವಣಾ ಕರ್ತವ್ಯ ನಿರತ ಸಂಚಾರಿ ದಳದ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.
ಗಂಗಾವತಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಪಕ್ಷದ ಅಭ್ಯರ್ಥಿ, ಉದ್ಯಮಿ ಹೆಚ್.ಆರ್. ಚನ್ನಕೇಶವ ಅವರು ನಾಮಪತ್ರ ಸಲ್ಲಿಸುವ ಉದ್ದೇಶಕ್ಕೆ ನಗರದಲ್ಲಿ ಬೃಹತ್ ರೋಡ್ ಶೋ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಮಕ್ಕಳನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಚುನಾವಣಾಧಿಕಾರಿ ಫ್ಲೈಯಿಂಗ್ ಸ್ಕ್ವಾಡ್ ಎಸ್. ಗುರುಪ್ರಸಾದ್ ಅವರು ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಶೇಖ್ ನಭಿಸಾಬ್ ಅವರ ಮೇಲೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮನೋಹರಗೌಡ ವಿರುದ್ಧ ದೂರು: ಕೆಆರ್ಪಿಪಿಯ ಮೆರವಣಿಗೆ ಸಂದರ್ಭದಲ್ಲಿ 8 ರಿಂದ 10 ವರ್ಷ ವಯೋಮಾನದ 15ಕ್ಕೂ ಹೆಚ್ಚು ಮಕ್ಕಳು ಕಂಡು ಬಂದಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಅಧಿಕಾರಿ ಸುದೇಶ್ ಕುಮಾರ ಎಂಬುವವರು ಮನೋಹರ ಗೌಡ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ರೋಡ್ ಶೋಗೆ ಅನುಮತಿ ನೀಡುವ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಸ್ಪಷ್ಟವಾಗಿ ಪಕ್ಷದ ತಾಲೂಕು ಅಧ್ಯಕ್ಷರಿಗೆ ಮಾಹಿತಿ ನೀಡಲಾಗಿತ್ತು. ಇದರ ಹೊರತಾಗಿಯೂ 10 ರಿಂದ 18 ವರ್ಷದೊಳಗಿನ 10-15 ಮಕ್ಕಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ಅಧಿಕಾರಿ ದೂರಿನಲ್ಲಿ ವಿವರಿಸಿದ್ದಾರೆ.
ಜನಾರ್ದನ ರೆಡ್ಡಿಗೆ ನೋಟಿಸ್ ಜಾರಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಆರ್ಪಿಪಿ) ಇಲ್ಲಿನ ಕೇಂದ್ರ ಕಚೇರಿಯ ಮೇಲೆ ಚುನಾವಣಾಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಕಚೇರಿಯಲ್ಲಿ ದಾಖಲೆ ಇಲ್ಲದೇ ಸಂಗ್ರಹಿಸಿಟ್ಟಿದ್ದ ಪಕ್ಷದ ಪ್ರಚಾರ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ 24 ಗಂಟೆಯೊಳಗೆ ಸೂಕ್ತ ದಾಖಲೆ ನೀಡಬೇಕು, ಇಲ್ಲವಾದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಜಿ. ಜನಾರ್ದನ ರೆಡ್ಡಿ ಅವರಿಗೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಸವಣೆಪ್ಪ ಕಳಶೆಟ್ಟಿ ನೋಟಿಸ್ ನೀಡಿದ್ದಾರೆ.
ಜನಾರ್ದನ ರೆಡ್ಡಿ ಭಾವಚಿತ್ರವಿರುವ ಹಾಗೂ ಕೆಆರ್ಪಿಪಿ ಚಿಹ್ನೆ ಇರುವ ಅಪಾರ ಪ್ರಮಾಣದ ಪ್ರಚಾರ ಸಾಮಗ್ರಿಗಳನ್ನು ಅನಧಿಕೃತವಾಗಿ ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿತ್ತು. ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ನಗರದ ಉಮರ್ ಶೇಂಗಾ ಮಿಲ್ ಹಿಂದೆ ಇರುವ ಮೈಲಾರಲಿಂಗೇಶ್ವರ ಕಟ್ಟಡದಲ್ಲಿ ಪಕ್ಷಕ್ಕೆ ಸಂಬಂಧಿಸಿದ ಕ್ಯಾಲೆಂಡರ್, ಬುಕ್ಲೆಟ್ ಕ್ಯಾಲೆಂಡರ್, ಶಾಲು, ಟೋಪಿ ಹಾಗೂ ಪಕ್ಷದ ಬಾವುಟಗಳು ಸಿಕ್ಕಿವೆ. ಸಾಮಗ್ರಿಗಳ ಬಗ್ಗೆ ಪ್ರಶ್ನಿಸಿದಾಗ ಪಕ್ಷದ ಕೆಲವರು ಅಪೂರ್ಣ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೆಆರ್ಪಿಪಿ ಕಚೇರಿ ಮೇಲೆ ಚುನಾವಣಾಧಿಕಾರಿಗಳಿಂದ ದಾಳಿ: ಜನಾರ್ದನ ರೆಡ್ಡಿಗೆ ನೋಟಿಸ್ ಜಾರಿ