ಗಂಗಾವತಿ (ಕೊಪ್ಪಳ): ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ-ತಾಯಿ ಸೇರಿದಂತೆ ಕುಟುಂಬದ ಇತರ ಸದಸ್ಯರ ವಿರುದ್ಧ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಶ್ರೀರಾಮನಗರದಲ್ಲಿ ಈ ಘಟನೆ ನಡೆದಿದ್ದು, ಇದೀಗ ಸಂತ್ರಸ್ತ ಬಾಲಕಿಯ ತಂದೆ ಯೇಸು, ತಾಯಿ ಶಾಂತಮ್ಮ, ಮದುವೆ ಮಾಡಿಕೊಂಡ ಗಂಡು ಕುರುಪಣ್ಣ ಆನಂದ್, ಮಾವ ಆನಂದ ಗದ್ವಾಲ್ ಕ್ಯಾಂಪ್ ಮತ್ತು ಅತ್ತೆ ಆಶೀರ್ವಾದಮ್ಮ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗಂಗಾವತಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಪ್ಪ ದೂರು ನೀಡಿದ್ದಾರೆ. ಅಪ್ರಾಪ್ತೆಗೆ 15 ವರ್ಷವಾಗಿದ್ದು, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಆರೋಪಿಗಳು ಬಾಲಕಿಯನ್ನು ಮದುವೆ ಮಾಡಿಕೊಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.