ಕೊಪ್ಪಳ: ಬಿಜೆಪಿ ಎಲ್ಲಿ ಗೆಲ್ಲೋದಿಲ್ಲ ಅಂದುಕೊಂಡಿದ್ರೋ ಅಲ್ಲಿ ಕಮಲ ಅರಳಿಸಿದ್ದೇ ವಿಜಯೇಂದ್ರ ಅವರು. ಅವರನ್ನು ತುಳಿಯೋ ಶಕ್ತಿ ಯಾರಿಗೂ ಇಲ್ಲ. ಮುಂದೊಂದು ದಿನ ಈ ರಾಜ್ಯದ ಮುಖ್ಯಮಂತ್ರಿ ಅವರೇ ಆಗಲಿದ್ದಾರೆ ಎಂದು ಕುರಿ ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಹೇಳಿದ್ದಾರೆ. ಕೊಪ್ಪಳದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರ ತಾಕತ್ತು, ಶಕ್ತಿ ಏನು ಅನ್ನೋದನ್ನು ನಾನು ಹತ್ತಿರದಿಂದ ನೋಡಿದ್ದೇನೆ ಎಂದರು.
ಕೊಪ್ಪಳದವರಾದರೂ, ನಾನು ಅವರ ಜೊತೆ ಪಕ್ಷ ಸಂಘಟನೆ ಮಾಡಿದ್ದೇನೆ. ಬಿಜೆಪಿ ಅವರನ್ನು ತುಳಿಯೋ ಕೆಲಸ ಮಾಡುತ್ತಿಲ್ಲ. ಬಿಜೆಪಿ ಪಕ್ಷದಲ್ಲಿಯೇ ಅವರು ಮುಖ್ಯಮಂತ್ರಿ ಆಗುತ್ತಾರೆ. ನಾನು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ. ಅಲ್ಲಿ ನಮ್ಮ ನಾಯಕ ದೊಡ್ಡನಗೌಡರು ಇದ್ದಾರೆ ಎಂದರು. ದೇಶ ವಿಂಗಡನೆ ಮಾಡೋಕೆ ಆರ್ಎಸ್ಎಸ್ ಹುಟ್ಟಿರೋದು ಎಂಬ ಅಮರೇಗೌಡರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಒಂದು ನಿರ್ದಿಷ್ಟ ಸಮುದಾಯದ ಒಲೈಕೆಗಾಗಿ ಅಮರೇಗೌಡರು ಮಾತನಾಡುತ್ತಾರೆ. ಕಾಂಗ್ರೆಸ್ನವರು ಈ ಓಲೈಕೆ ರಾಜಕಾರಣ ಬಿಡಬೇಕು ಎಂದರು.
ಅನುಗ್ರಹ ಯೋಜನೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿತ್ತು. ಈ ಯೋಜನೆ ಮುಂದುವರಿಸಲು ಕುರಿಗಾಯಿಗಳು ಸಾಕಷ್ಟು ಆಗ್ರಹ ಮಾಡಿದ್ದರು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ಸಹ ಕುರಿಗಾರರ ಅನುಕೂಲಕ್ಕಾಗಿ ಅನುಗ್ರಹ ಯೋಜನೆಗೆ ಆಗ ಸಿಎಂ ಆಗಿದ್ದ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ ವೇಳೆ ಸ್ಪಂದಿಸಿದ್ದರು. ಅನುಗ್ರಹ ಯೋಜನೆಯನ್ನು ಮುಂದುವರೆಸುವುದರ ಜತೆಗೆ 40 ಕೋಟಿ ಬಾಕಿ ಹಣ ಬಿಡುಗಡೆ ಮಾಡಿದ್ದರು ಎಂದು ತಳ್ಳಿಕೇರಿ ನೆನಪಿಸಿಕೊಂಡರು.
ರಾಜ್ಯಾದ್ಯಂತ 45 ಸಾವಿರ ಕುರಿಗಾರರಿಗೆ 40 ಕೋಟಿ ರುಪಾಯಿ ನೇರವಾಗಿ ಖಾತೆಗೆ ಬಿಡುಗಡೆ ಮಾಡಲಾಗಿದೆ. ಮಾರ್ಚ್ವರೆಗೆ ಅನುಗ್ರಹ ಯೋಜನೆಯಡಿಯ ಎಲ್ಲಾ ಅರ್ಜಿಗಳು ಪೂರ್ಣಗೊಂಡಿವೆ. ರಾಜ್ಯದಲ್ಲಿ 56 ಸಾವಿರ ಜನ ಕುರಿಗಾರರಿಗೆ ಉಚಿತವಾಗಿ ವಿಮಾ ಯೋಜನೆ ಜಾರಿ ಮಾಡಲಾಗಿದೆ. ಸಂಚಾರಿ ಕುರಿಗಾರರಿಗೆ ಇದರಲ್ಲಿ ಮೊದಲ ಆದ್ಯತೆ ನೀಡಲಾಗಿದೆ ಎಂದರು.
ಇದನ್ನೂ ಓದಿ: ನಿಮ್ಮಪ್ಪನ ಜೈಲಿಗೆ ಕಳುಹಿಸಿದ್ದು ಯಾರು? ಅಧಿಕಾರದಿಂದ ಇಳಿಯಲು ನೀನೇ ಕಾರಣ ಅಲ್ಲವೇ?.. ವಿಜಯೇಂದ್ರಗೆ ಕುಕ್ಕಿದ ಹಳ್ಳಿಹಕ್ಕಿ