ಗಂಗಾವತಿ: ಕನಕಗಿರಿ ವಿಧಾನಸಭಾ ಕ್ಷೇತ್ರದ ಆ ಗ್ರಾಮ ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷವಾಗಿದ್ದರೂ ಸರ್ಕಾರಿ ಬಸ್ಸಿನ ಮುಖ ಕಂಡಿರಲಿಲ್ಲ. ಆದರೆ ಭಾನುವಾರದಿಂದ ಮೊದಲ ಬಾರಿಗೆ ಸಂಚಾರಿ ಸೇವೆ ಆರಂಭಿಸಲಾಗಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ತಾಲೂಕು ಪಂಚಾಯತ್ನ್ನು ಪ್ರತಿನಿಧಿಸುವ ಉಪಾಧ್ಯಕ್ಷೆ ಭೀಮಮ್ಮ ರಾಮನಗೌಡ ಅವರ ಸ್ವಂತ ಊರಾದ ಕನಕಗಿರಿ ವಿಧಾನಸಭಾ ಕ್ಷೇತ್ರದ ಬುನ್ನಟ್ಟಿ ಗ್ರಾಮಕ್ಕೆ ಈವರೆಗೆ ಸಾರಿಗೆ ವಾಹನದ ಸೌಲಭ್ಯವೇ ಇರಲಿಲ್ಲ. ಸುಮಾರು 800 ಜನ ಇರುವ ಈ ಗ್ರಾಮದಲ್ಲಿ 80ಕ್ಕೂ ಹೆಚ್ಚು ಶಾಲಾ-ಕಾಲೇಜಿನ ಮಕ್ಕಳಿದ್ದು, ನಿತ್ಯವೂ ಸಮೀಪದ ನವಲಿ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಅಲ್ಲಿಂದ ಬೇರೆಡೆ ಹೋಗುವ ಸ್ಥಿತಿ ಇತ್ತು. ಇದೀಗ ಈ ಗ್ರಾಮದಿಂದಲೇ ವಾಹನ ಸೌಲಭ್ಯ ಕಲ್ಪಿಸಿರುವುದು ಜನರ ಸಂತಸಕ್ಕೆ ಕಾರಣವಾಗಿದೆ.
ಬುನ್ನಟ್ಟಿಯಿಂದ ಸಂಚರಿಸುವ ಸಾರಿಗೆ ವಾಹನ ನವಲಿ ಮಾರ್ಗವಾಗಿ ಗಂಗಾವತಿ ತಲುಪಲಿದೆ. ಗ್ರಾಮದಿಂದ 20 ಕಿ.ಮೀ. ದೂರವಿರುವ ಕನಕಗಿರಿಗೆ ಒಂದು ಪ್ರತ್ಯೇಕ ವಾಹನ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಹೇಳಿದರು.