ಕುಷ್ಟಗಿ (ಕೊಪ್ಪಳ): ಅಂದಾಜು 4 ಕೋಟಿ ವೆಚ್ಚದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕುಷ್ಟಗಿ ತಾಲೂಕು ಕೇಂದ್ರೀಯ ಬಸ್ ನಿಲ್ದಾಣದ ಮರು ನಿರ್ಮಾಣದ ಕಾಮಗಾರಿಯನ್ನು ಮಾದರಿ ಬಸ್ ನಿಲ್ದಾಣವಾಗಿ ನಿರ್ಮಿಸಬೇಕೆಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಮರು ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಒಂದು ದಿನವೂ ನಿಲ್ಲದೇ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಸರ್ಕಾರಿ ಕೆಲಸವೆಂದರೆ ಸಾರ್ವಜನಿಕರಲ್ಲಿ ಕಳಪೆ ಎನ್ನುವ ಅನುಮಾನವಿದೆ. ಸಾರ್ವಜನಿಕರು ಮೆಚ್ಚುವ ರೀತಿಯಲ್ಲಿ ಈ ಬಸ್ ನಿಲ್ದಾಣ ನಿರ್ಮಿಸಬೇಕು ಎಂದರು.
ಕ್ಷೇತ್ರದಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ತುಂಬಿಸುವ ಕೆಲಸವಾಗಿದೆ. ಜನತೆಯ ಅಪೇಕ್ಷೆಯ ಜೊತೆಗೆ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಆದೇಶದ ಮೇರೆಗೆ ಇರುವ ಬಸ್ ನಿಲ್ದಾಣ ಕಟ್ಟಡ ಉಳಿಸಿಕೊಂಡು, ಕಾಮಗಾರಿ ವಿಸ್ತರಿಸಿ ಅಭಿವೃಧ್ಧಿ ಪಡಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಮಾಜಿ ಶಾಸಕ ಹಸನಸಾಬ್ ದೋಟಿಹಾಳ, ಭಾರತಿ ನೀರಗೇರಿ, ದೇವೇಂದ್ರಪ್ಪ ಬಳೂಟಗಿ, ವಿಭಾಗೀಯ ನಿಯಂತ್ರಕ ಎಂ.ಎ. ಮುಲ್ಲಾ, ಎಇಇ ಪ್ರಸನ್ನ, ಭಾರತೀ ನೀರಗೇರಿ, ಘಟಕಾಧಿಕಾರಿ ಸಂತೋಷಕುಮಾರ ಶೆಟ್ಟಿ, ನಿಲ್ದಾಣದ ಅಧಿಕಾರಿ ಕಾಯಿಗಡ್ಡಿ, ಗುತ್ತಿಗೆದಾರ ಅಶೋಕ ಬಳೂಟಗಿ ಇದ್ದರು.