ಕೊಪ್ಪಳ: ಬರಪೀಡಿತ ಜಿಲ್ಲೆಗಳ ಪ್ರವಾಸದಲ್ಲಿರುವ ಮಾಜಿ ಸಿಎಂ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಜಿಲ್ಲೆಯ ಕೆಲ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲು ಹಿರೇಹಳ್ಳ ವೀಕ್ಷಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅವರು ಬರ ಪರಿಸ್ಥಿತಿ ಮತ್ತು ನಿರ್ವಹಣೆ ಕುರಿತಂತೆ ಮಾಹಿತಿ ಪಡೆದರು. ನಂತರ ಕೊಪ್ಪಳ ತಾಲೂಕಿನ ಕಲ್ ತಾವರೆಗೆರೆ ಕೆರೆಯಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ವೀಕ್ಷಿಸಿದರು. ಜೊತೆಗೆ ಅಲ್ಲಿಯ ಕೂಲಿ ಕಾರ್ಮಿಕರಿಂದ ಕುಡಿಯುವ ನೀರು, ಕೂಲಿ ಸೇರಿದಂತೆ ಇನ್ನಿತರೆ ಸರ್ಕಾರದ ಸೌಲಭ್ಯಗಳು ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಕೂಕನಪಳ್ಳಿ ಗ್ರಾಮದ ಬಳಿ ಮಳೆ ಇಲ್ಲದೆ ನಾಶವಾದ ಬಾಳೆ ತೋಟ ಹಾಗೂ ಕಲ್ಲಬಾವಿ ಕೆರೆಗೆ ತೆರಳಿ ವೀಕ್ಷಿಸಿದರು. ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಇತ್ತೀಚಿಗೆ ಸಿಡಿಲು ಬಡಿದು ಮೃತಪಟ್ಟಿದ್ದ ಹನುಮಂತಪ್ಪ ಗದ್ದಿ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಜೊತೆಗೆ ವೈಯಕ್ತಿಕ ಪರಿಹಾರ ನೀಡಿದರು.
'ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ':
ಹಿರೇವಂಕಲಕುಂಟಾ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಎಸ್ವೈ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ನಿನ್ನೆ ಬಾಗಲಕೋಟೆ ಜಿಲ್ಲೆ, ಇಂದು ಕೊಪ್ಪಳ ಜಿಲ್ಲೆಯಲ್ಲಿ ಬರಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಕೊಪ್ಪಳ ಜಿಲ್ಲೆಯಾದ್ಯಂತ ಕುಡಿಯುವ ನೀರಿಗೆ ಹಾಹಾಕಾರವಿದೆ. ಬರ ನಿರ್ವಹಣೆಯಲ್ಲಿ ಜಿಲ್ಲಾಡಳಿತ ವಿಫಲವಾಗಿರುವುದು ಕಂಡುಬರುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಿಎಂ ಬರಪೀಡಿತ ಪ್ರದೇಶಗಳಿಗೆ ತೆರಳುತ್ತಿಲ್ಲ. ಬರ ಪರಿಹಾರ ಕಾಮಗಾರಿಗಳು ನಡೆಯುತ್ತಿಲ್ಲ. ಎಲ್ಲೆಡೆ ತೀವ್ರ ಬರ ಇದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಗ್ರಾಮ ವಾಸ್ತವ್ಯದ ಬಗ್ಗೆ ನನ್ನ ಆಕ್ಷೇಪವಿಲ್ಲ. ಆದರೆ ಗ್ರಾಮ ವಾಸ್ತವ್ಯ ಮಾಡಿದ ಗ್ರಾಮಗಳಿಗೆ 1ಕೋಟಿ ರೂಪಾಯಿ ನೀಡಿ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದರು. ಆದರೆ ಎಲ್ಲಿ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.
'ಕಿಕ್‌ಬ್ಯಾಕ್ ಪಡೆದು ಜಿಂದಾಲ್‌ಗೆ ಭೂಮಿ':
ಕಿಕ್‌ಬ್ಯಾಕ್ ತೆಗೆದುಕೊಂಡು ಜಿಂದಾಲ್‌ಗೆ ಭೂಮಿ ನೀಡಲಾಗಿದೆ. ಜಿಂದಾಲ್‌ಗೆ ಈಗ ಭೂಮಿ ನೀಡುವುದು ಅವಶ್ಯಕವಾಗಿಲ್ಲ. ಅದಕ್ಕೆ ಸಾಕಾಗುವಷ್ಟು ಭೂಮಿಯನ್ನು ಈ ಹಿಂದೆಯೇ ನೀಡಲಾಗಿದೆ ಎಂದರು.
'ನಾವು ಆಪರೇಷನ್ ಮಾಡುವುದಿಲ್ಲ':
ನಾವು ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ಮಾಡಿಲ್ಲ, ಮಾಡುವುದಿಲ್ಲ. ಅವರವರು ಕಚ್ಚಾಡಿ ಸರ್ಕಾರ ಬಿದ್ದರೆ ನಾವು ಸರ್ಕಾರ ನಡೆಸುತ್ತೇವೆ. ಸುಮಲತಾ ಬಿಜೆಪಿ ಕಚೇರಿಗೆ ಬಂದಿರುವುದು ನನಗೆ ಗೊತ್ತಿಲ್ಲ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಹೇಳಿದರು.
ಈ ವೇಳೆ ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪಆಚಾರ್, ಬಸವರಾಜ್ ದಡೇಸುಗೂರು, ಪರಣ್ಣ ಮುನವಳ್ಳಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ಸೇರಿದಂತೆ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.