ಕೊಪ್ಪಳ: ದೇಶ ಮೊದಲು ಎಂಬುವುದು ಬಿಜೆಪಿ ತತ್ತ್ವವಾಗಿದೆ. ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಅದನ್ನ ಸಾಬೀತು ಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಬಿಜೆಪಿ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯ ಸಕಾರಾತ್ಮಕ ಚಿಂತನೆಗೆ ಜನರು ಮಾರು ಹೋಗಿದ್ದಾರೆ. 2023ರ ಚುನಾವಣೆಯಲ್ಲಿ ಮೋದಿ ನಾಯಕತ್ವ, ನಡ್ಡಾ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಸಿಎಂ ಇದೇ ವೇಳೆ ಘೋಷಣೆ ಮಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಮಾಡಿದರು..?: ನಮ್ಮ ಸರ್ಕಾರ ಒಳ ಮೀಸಲಾತಿ ನೀಡಲು ಉಪ ಸಮಿತಿ ರಚಿಸಿ ಕಾರ್ಯಪ್ರವೃತ್ತರಾಗಿದ್ದೇವೆ. ಆದರೆ, ಇದಕ್ಕೆ ಸಿದ್ದರಾಮಯ್ಯ ಕಣ್ಣೋರೆಸುವ ತಂತ್ರ ಎಂದು ಲೇವಡಿ ಮಾಡುತ್ತಿದ್ದಾರೆ. ಇವರು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು? ಇದೀಗ ಅಧಿಕಾರ ನೀಡಿದರೆ ಒಳ ಮೀಸಲಾತಿ ಮಾಡುವುದಾಗಿ ಹೇಳುತ್ತಿದ್ದಾರೆ. ಈ ಧೋರಣೆ ಅನುಸರಿಸುತ್ತಿದ್ದಾರೆ. 75 ವರ್ಷದಿಂದ ಮೋಸ, ಸುಳ್ಳು ಹೇಳುವುದನ್ನೇ ಅಜೆಂಡಾ ಮಾಡಿಕೊಂಡು ಅಧಿಕಾರ ಮಾಡಿದರು ಎಂದು ಇದೇ ವೇಳೆ ಸಿಎಂ ಬೊಮ್ಮಾಯಿ ಆರೋಪಿಸಿದರು.
ಅಂಜನಾದ್ರಿ ಅಭಿವೃದ್ಧಿ: ಅಂಜನಾದ್ರಿ ಅಭಿವೃದ್ಧಿಗೆ 140 ಕೋಟಿ ರೂ. ಅನುದಾನ ನೀಡಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು. ರೋಪ್ ವೇ, ರಸ್ತೆಗಳ ಅಭಿವೃದ್ಧಿ, ಯಾತ್ರಿ ನಿವಾಸ ಹೀಗೆ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸ್ವ ಉದ್ಯೋಗಕ್ಕೆ ಉತ್ತೇಜನ: ಯುವಶಕ್ತಿ ಯೋಜನೆಯಡಿ 5 ಲಕ್ಷ ಯುವಕರು, 5 ಲಕ್ಷ ಯುವತಿಯರಿಗೆ ಸ್ವ ಉದ್ಯೋಗ ಮಾಡಲು ಉತ್ತೇಜನ ಮಾಡಲಾಗುತ್ತಿದೆ. ದುಡಿಯುವ ವರ್ಗಕ್ಕೆ ಕೈ ಬಲ ಪಡಿಸಲಾಗುತ್ತಿದೆ.
ವಿಮಾನ ನಿಲ್ದಾಣಕ್ಕೆ 40ಕೋಟಿ: ಕೊಪ್ಪಳ ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಕೆಕೆಆರ್ಡಿಬಿ ಯಲ್ಲಿ 40 ಕೋಟಿ ರೂ. ಮೀಸಲಿಡಲಾಗಿದ್ದು, ಭೂ ಸ್ವಾಧೀನ ಬಗ್ಗೆ ಡಿಸಿಗೆ ಸೂಚನೆ ನೀಡಲಾಗುವುದು. ಮುಂದಿನ ಬಜೆಟ್ ನಲ್ಲಿ ಜಿಲ್ಲೆಗೆ ಸೂಪರ್ ಸ್ಪಷಾಲಿಟಿ ಆಸ್ಪತ್ರೆಗೆ ಅನುದಾನ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಕೊಪ್ಪಳದ ಜನತೆಗೆ ಭರವಸೆ ತುಂಬಿದರು.
ಇದನ್ನೂ ಓದಿ: ಕಾಂಗ್ರೆಸ್ ಬಾಗಿಲು - ಕಿಟಕಿ ಇಲ್ಲದ ಮನೆ: ಸಿಎಂ ಬೊಮ್ಮಾಯಿ