ಗಂಗಾವತಿ: ಇಡೀ ರಾಷ್ಟ್ರದ ಬಗ್ಗೆ ಕಳಕಳಿ ಹೊಂದಿರುವ ಏಕೈಕ ನಾಯಕ ಎಂದರೆ ಅದು ಸಿದ್ದರಾಮಯ್ಯ ಎಂದು ಬಿಜೆಪಿ ಸಂಸದ ಕರಡಿ ಸಂಗಣ್ಣ ಬಾಯ್ತಪ್ಪಿ ಮಾಡಿರುವ ಭಾಷಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 9 ವರ್ಷ ಸಂದ ಹಿನ್ನೆಲೆ ನಗರದ ಲಕ್ಷ್ಮಿ ಕ್ಯಾಂಪಿನಲ್ಲಿ ಬಿಜೆಪಿಯಿಂದ ಆಯೋಜಿಸಲಾಗಿದ್ದ 'ಮಹಾ ಸಂಪರ್ಕ' ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕೇಂದ್ರ ಸರ್ಕಾರದ 9 ವರ್ಷದ ಸಾಧನೆಗಳನ್ನು ಬಿಂಬಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು. ಬಜೆಟ್ ಘೋಷಣೆ ಮಾಡುತ್ತಿದ್ದ ಸಿದ್ದರಾಮಯ್ಯ ಭಾಷಣ ಬಿಟ್ಟು ಕೇಂದ್ರದ ವಿರುದ್ಧ ಟೀಕೆ ಮಾಡಿದರು ಎಂದು ಅವರು ದೂರಿದರು.
ಮುಂದುವರೆದು ಮಾತನಾಡಿದ ಸಂಸದ ಕರಡಿ ಸಂಗಣ್ಣ "ಇಡೀ ರಾಷ್ಟ್ರದ ಬಗ್ಗೆ ಕಳಕಳಿ ಹೊಂದಿರುವ ನಾಯಕ ಎಂದರೆ ಸಿದ್ದರಾಮಯ್ಯ ಎಂದು ನಾವು ಕರೆಯಬೇಕಾಗಿದೆ. ಇಂತಹವರಿಗೆ ಪಾಠ ಕಲಿಸಬೇಕಾದರೆ ಮತ್ತೆ ನೇರಂದ್ರ ಮೋದಿ ಅವರನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು. ಸಾರ್ವಜನಿಕ ವೇದಿಕೆಯಲ್ಲಿ ಸಂಸದ ಕರಡಿ ಸಂಗಣ್ಣ ಭಾಷಣ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾಯ್ತಪ್ಪಿ ಸಿದ್ದರಾಮಯ್ಯ ಅವರನ್ನು ಕೊಂಡಾಡಿದ್ದಾರೆ. ಈ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಮೋದಿಯಂತ ನಾಯಕನ್ನು ಕಳೆದುಕೊಂಡರೆ ಸಂಕಷ್ಟ: ಕೇವಲ 9 ವರ್ಷದಲ್ಲಿ ಭಾರತ ದೇಶವನ್ನು ಶಕ್ತಿಶಾಲಿ ದೇಶಗಳ ಸಾಲಿನಲ್ಲಿ ನಿಲ್ಲಿಸಿದ ಮತ್ತು ಆರ್ಥಿಕವಾಗಿ ಬಲಿಷ್ಠವಾಗುವಂತೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯಂತ ಉನ್ನತ ನಾಯಕನನ್ನು ಕಳೆದುಕೊಂಡರೆ ದೇಶಕ್ಕೆ ನಷ್ಟ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ನನ್ನನ್ನು ಸೇರಿದಂತೆ ಬಹುತೇಕ ರಾಜಕಾರಣಿಗಳು ಸ್ವಾರ್ಥಪರರು. ನಾವು, ನನ್ನ ಕುಟುಂಬ, ಆಸ್ತಿ-ಹಣ ಎಂದು ಆಲೋಚಿಸುತ್ತೇವೆ. ಆದರೆ ನರೇಂದ್ರ ಮೋದಿ ಹಾಗಲ್ಲ. ಇಡೀ ದೇಶವೇ ಅವರ ಕುಟುಂಬ. ಹೀಗಾಗಿ ದೇಶದ ಏಳಿಗೆಗಾಗಿ ಹಗಲಿರುಳು ಶ್ರಮಿಸುವ ವ್ಯಕ್ತಿ. ದೇಶವನ್ನು ಆರ್ಥಿಕವಾಗಿ ಸಂಕಷ್ಟದಿಂದ ಪಾರು ಮಾಡಿದ್ದಾರೆ. ಇಂದು ಜಗತ್ತೇ ನಮ್ಮತ್ತ ನೋಡುವಂತೆ ಮೋದಿ ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.
ಇಡೀ ವಿಶ್ವವೇ ಇಂದು ಭಾರತದ ನಾಯಕತ್ವದತ್ತ ನೋಡುತ್ತಿದೆ. ಕಳೆದ ಮೂರ್ನಾಲ್ಕು ದಶಕಕಗಳಲ್ಲಿ ಆಗದಷ್ಟು ಕೆಲಸ ಕೇವಲ 9 ವರ್ಷಗಳಲ್ಲಿ ಆಗಿವೆ. ಇಡೀ ದೇಶ ಅಭಿವೃದ್ಧಿ ಪಥದತ್ತ ಸಾಗಿದೆ. ಇಂತಹ ನಾಯಕನನ್ನು ಕಳೆದುಕೊಂಡರೆ ಭವಿಷ್ಯತ್ತಿನ ಭಾರತಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳಿಗೆ ಮಾರು ಹೋಗದೇ ನಿಜವಾದ ನಾಯಕನನ್ನು ಆಯ್ಕೆ ಮಾಡುವ ಗುರುತರ ಜವಾಬ್ದಾರಿ ಜನರ ಕೈಯಲ್ಲಿದೆ ಎಂದು ಸಂಗಣ್ಣ ಹೇಳಿದರು.
ಇದಕ್ಕೂ ಮೊದಲು ಕಾಡಾದ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಮಾಜಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು. ಜೈನ ಮುನಿ ಹಾಗೂ ಹಿಂದೂ ಯುವಕನ ಕೊಲೆ ಹಿನ್ನೆಲೆ ಮೌನಾಚರಣೆ ಮಾಡಲಾಯಿತು.
ಇದನ್ನೂ ಓದಿ: ರಾಯರೆಡ್ಡಿ ವಿರುದ್ಧ ಗರಂ: ಸ್ವಪಕ್ಷೀಯ ಶಾಸಕನ ವಿರುದ್ಧ ಹೆಚ್.ಆರ್ ಶ್ರೀನಾಥ್ ಟೀಕಾಸ್ತ್ರ