ಕೆ.ಆರ್.ಪುರ/ಕೊಪ್ಪಳ/ದಾವಣಗೆರೆ: ಕೊರೊನಾ ಏರಿಕೆಯಾಗುತ್ತಿರುವ ಮಧ್ಯೆಯೇ ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿಗಾಗಿ ಪಾದಯಾತ್ರೆ ನಡೆಸುತ್ತಿರುವುದರ ವಿರುದ್ಧ ಬಿಜೆಪಿ ನಾಯಕರು, ಸಚಿವರು ಮುಗಿಬಿದ್ದಿದ್ದಾರೆ. ಪಾದಯಾತ್ರೆಯಲ್ಲಿ ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದರ ಬಗ್ಗೆಯೂ ಟೀಕಿಸಿದ್ದಾರೆ.
ಯೋಜನೆ ಸ್ಥಗಿತವಾದರೆ ಕಾಂಗ್ರೆಸ್ ಕಾರಣ: ಸಚಿವ ಬೈರತಿ
ಮೇಕೆದಾಟು ಯೋಜನೆ ವಿವಾದವನ್ನು ಸೂಕ್ಷ್ಮವಾಗಿ ಬಗೆಹರಿಸಬೇಕಿದೆ. ದ್ವಂದ್ವ ನಿಲುವಿನ ಕಾಂಗ್ರೆಸ್ ಪಾದಯಾತ್ರೆ ಮಾಡಲು ಬೀದಿಗಿಳಿದಿರುವುದರಿಂದ ಇನ್ನಷ್ಟು ಕ್ಲಿಷ್ಟಕರವಾಗಲಿದೆ. ಮೇಕೆದಾಟು ಯೋಜನೆ ಸ್ಥಗಿತವಾದರೆ, ಅದಕ್ಕೆ ಕಾಂಗ್ರೆಸ್ಸೇ ನೇರ ಹೊಣೆಯಾಗಲಿದೆ ಎಂದು ಸಚಿವ ಬೈರತಿ ಬಸವರಾಜ್ ಹೇಳಿದರು.
ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣಕ್ಕೋಸ್ಕರ ಕಾಂಗ್ರೆಸ್ ಮೇಕೆದಾಟು ಯೋಜನೆಯನ್ನು ಇನ್ನಷ್ಟು ಜಟಿಲಗೊಳಿಸಿದೆ ಎಂದು ಹರಿಹಾಯ್ದರು.
ಡಿ.ಕೆ.ಶಿವಕುಮಾರ್ ನೀರಾವರಿ ಸಚಿವರಾಗಿ ಮತ್ತು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಈ ಯೋಜನೆಯ ಸಮಸ್ಯೆ ಏನು ಎಂದು ಗೊತ್ತಿದೆ. ಎಲ್ಲಾ ಗೊತ್ತಿದ್ದೂ, ಈ ರೀತಿಯ ಕೆಲಸ ಮಾಡುವುದು ಸರಿಯಲ್ಲ ಎಂದರು.
ರಾಜಕೀಯಕ್ಕಾಗಿ ಪಾದಯಾತ್ರೆ: ಸಚಿವ ಆಚಾರ್
ಜನರಿಗಾಗಿ ರಾಜಕಾರಣ ಮಾಡಬೇಕು, ಕೆಲಸ ಮಾಡಬೇಕು. ಆದರೆ, ಕಾಂಗ್ರೆಸ್ನವರು ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಟೀಕಿಸಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ. ಇವರಿಗೆ ಜನರ ಜೀವ ರಕ್ಷಣೆ ಬಗ್ಗೆ ಕಾಳಜಿ ಇಲ್ಲ. ರಾಜಕೀಯವೇ ಮುಖ್ಯವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಇಂತಹ ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮೇಕೆದಾಟು ಯೋಜನೆ ಜಾರಿ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ಡಿಪಿಆರ್ ಮಾಡಲು ಆಗಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಡಿಪಿಆರ್ ಮಾಡಿದ್ದಾರೆ. ಕಾಂಗ್ರೆಸ್ಗೆ ಮೇಕೆದಾಟು ಬಗ್ಗೆ ಪ್ರಾಮಾಣಿಕ ಕಳಕಳಿ ಇಲ್ಲ ಎಂದರು.
ಪಾದಯಾತ್ರೆ ಬಗ್ಗೆ ಸಂಸದ ಸಿದ್ದೇಶ್ವರ್ ಲೇವಡಿ
ಕಾಂಗ್ರೆಸ್ ನಾಯಕರು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿದ್ದಾರೆಂದು ಸಂಸದ ಜಿ.ಎಂ. ಸಿದ್ದೇಶ್ವರ್ ಲೇವಡಿ ಮಾಡಿದರು.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಗಿಮಿಕ್. ಈ ಪಾದಯಾತ್ರೆಯಿಂದ ಯಾವುದೇ ಅನುಕೂಲ ಆಗುವುದಿಲ್ಲ. ನಮ್ಮ ಸರ್ಕಾರ ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಿಲಿಕ್ಕೆ ತಯಾರಾಗಿದೆ. ಆದರೆ, ತಮಿಳುನಾಡಿನ ಸರ್ಕಾರ ಕೋರ್ಟ್ ಮೊರೆ ಹೋಗಿದ್ದರಿಂದ ಯೋಜನೆ ವಿಳಂಬವಾಗಿದೆ ಎಂದರು.
ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಕಾಂಗ್ರೆಸ್ ಸರ್ಕಾರ ಇದೆ. ಕಾಂಗ್ರೆಸ್ ನಾಯಕರು ಹೇಳಿ ಕೋರ್ಟ್ನಿಂದ ಕೇಸ್ ವಾಪಸ್ ತೆಗೆದುಕೊಳ್ಳಲಿ. ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದರು.
ಇದನ್ನೂ ಓದಿ: ಕೋವಿಡ್ ಸೋಂಕಿತರ ಡಿಸ್ಚಾರ್ಜ್ ಪಾಲಿಸಿ ಪರಿಷ್ಕರಿಸಿದ ಆರೋಗ್ಯ ಇಲಾಖೆ..