ಕುಷ್ಟಗಿ(ಕೊಪ್ಪಳ): ಲಂಬಾಣಿ, ಬೋವಿ ಇತರೆ ಸಮುದಾಯಗಳಿಗೆ ಅನ್ಯಾಯವಾಗದಂತೆ ನ್ಯಾ. ಏ ಜೆ ಸದಾಶಿವ ಆಯೋಗದ ವರದಿ ಜಾರಿಗೆ ಬಿಜೆಪಿ ಬದ್ಧವಾಗಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿದರು.
ನಾರಾಯಣಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ತಾಲೂಕಿಗೆ ಭೇಟಿ ನೀಡಿದ್ದರು. ಈ ವೇಳೆ ಮಾದಿಗ ಸಮುದಾಯ ಹಾಗೂ ಬಿಜೆಪಿ ಕಾರ್ಯಕರ್ತರು ಸಚಿವ ನಾರಾಯಣಸ್ವಾಮಿ ಅವರನ್ನು ಪುಷ್ಪವೃಷ್ಟಿಯ ಮೂಲಕ ಬರಮಾಡಿಕೊಂಡರು.
ಇಲ್ಲಿನ ಮೇಲ್ಸೇತುವೆ ವೀಕ್ಷಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದಾಶಿವ ಆಯೋಗದ ವರದಿ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದೆ. ನ್ಯಾಯಯುತ ದಿಕ್ಕಿನಲ್ಲಿ ಜಾರಿಗೆ ತರಲು ಬಿಜೆಪಿ ಸರ್ಕಾರ ಬದ್ಧವಾಗಿದೆ.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅನೇಕ ಉಪ ಚುನಾವಣೆಗಳಲ್ಲಿ ಗೆದ್ದಿದೆ. ಹಾನಗಲ್, ಸಿಂದಗಿ ಉಪಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿನಯ್ಕುಮಾರ್ ಮೇಲಿನಮನಿ, ಮಾದಿಗ ಮಹಾಸಭಾ ಅದ್ಯಕ್ಷ ನಾಗರಾಜ ಮೇಲಿನಮನಿ ಸೇರಿ ಮಾದಿಗ ಸಮಾಜ ಕಾರ್ಯಕರ್ತರು ಭಾಗವಹಿಸಿದ್ದರು.
ಇದನ್ನೂ ಓದಿ: ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ : ವರದಿ ಕೇಳಿದ ಹೈಕೋರ್ಟ್