ಗಂಗಾವತಿ: ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೊನಾ ಮಾರಿ ಜಗತ್ತಿನಿಂದ ಸಂಪೂರ್ಣವಾಗಿ ತೊಲಗಬೇಕು ಎಂದು ಹರಕೆ ಹೊತ್ತು ಮಹಿಳಾ ತಂಡದ ಸದಸ್ಯರು ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಹನುಮಾನ್ ಚಾಲೀಸಾ ಮಂತ್ರಪಠಣಕ್ಕೆ ಭರತನಾಟ್ಯದ ರೂಪಕ ನೀಡಿ ಪ್ರದರ್ಶನ ನೀಡಿದ್ದಾರೆ.
ಹೊಸಪೇಟೆಯ ಅಂಜಲಿ ಭರತನಾಟ್ಯ ಕಲಾ ಕೇಂದ್ರ ತಂಡದ ಸದಸ್ಯರಾದ ಪೂಜಾ ಎಂ.ಎಂ., ಗೀತಪ್ರಿಯಾ, ಅಮೃತಾ.ಪಿ.ಜೆ., ವೈಷ್ಣವಿ ಎಚ್ ಹಾಗೂ ಅಪೂರ್ವ ಎಂಬ ಕಲಾವಿದೆಯರು ಭರತನಾಟ್ಯದ ಮೂಲಕ ಹನುಮಾನ ಚಾಲೀಸಾ ಮಂತ್ರದ ನಾಟ್ಯ ಪ್ರದರ್ಶಿಸಿದ್ದಾರೆ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹನುಮಂತ ದೇವರ ದೇಗುಲದ ಪ್ರಾಂಗಣದಲ್ಲಿ ನಡೆದ ಭರತನಾಟ್ಯವನ್ನು ದೇಗುಲದ ದರ್ಶನಕ್ಕೆ ಆಗಮಿಸಿದ್ದ ನೂರಾರು ಭಕ್ತರು ಕಣ್ತುಂಬಿಕೊಂಡರು. ಬಳಿಕ ದೇಗುಲದಿಂದ ಕಲಾವಿದರನ್ನು ಗೌರವಿಸಲಾಯಿತು.
ಈ ಬಗ್ಗೆ ಮಾತನಾಡಿದ ತಂಡದ ಮುಖ್ಯಸ್ಥೆ ಅಂಜಲಿ, ಕೊರೊನಾದಿಂದಾಗಿ ಕಳೆದ ಆರು ತಿಂಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿನ ಸಾಕಷ್ಟು ಮಹಾನ್ ದಿಗ್ಗಜರನ್ನು ಕಳೆದುಕೊಂಡಿದ್ದೇವೆ. ಕೊರೊನಾ ರಾಜ್ಯ, ದೇಶದಿಂದ ತೊಲಗಬೇಕು ಎಂದು ಪ್ರಾರ್ಥಿಸಿ ದೇವರಲ್ಲಿ ನಾಟ್ಯದ ಮೂಲಕ ಹರಕೆ ಸಲ್ಲಿಸಲಾಗಿದೆ ಎಂದರು.