ಕೊಪ್ಪಳ : ಖಾಸಗಿ ಶಾಲೆಯ ವಿದ್ಯಾರ್ಥಿಗಳು ಮತ್ತು ಸಬಲವಿರುವ ಕುಟುಂಬದ ಮಕ್ಕಳು ಹಣ ಕೊಟ್ಟು ಸಮ್ಮರ್ ಕ್ಯಾಂಪ್ಗೆ ಹೋಗುತ್ತಾರೆ. ಆದರೆ ಸರ್ಕಾರಿ ಶಾಲೆ ಮಕ್ಕಳಿಗೆ ಸಮ್ಮರ್ ಕ್ಯಾಂಪ್ ಅನ್ನೋದು ನಿಲುಕದ ನಕ್ಷತ್ರ. ಸದ್ಯ ಸರ್ಕಾರಿ ಶಾಲೆಯ ಮಕ್ಕಳಿಗೆ ಸರ್ಕಾರ ವಿಶೇಷ ಒಲವು ತೋರಿದ್ದು 'ಬೇಸಿಗೆ ಸಂಭ್ರಮ' ಎಂಬ ವಿನೂತನ ಕಾರ್ಯಕ್ರಮ ರೂಪಿಸಿದೆ.
ಸರ್ಕಾರಿ ಶಾಲೆಯಲ್ಲಿ ಓದುವ ಅದೆಷ್ಟೋ ಬಡ ಮಕ್ಕಳಿಗೆ ಸಮ್ಮರ್ ಕ್ಯಾಂಪ್ ಅನ್ನೋದು ಕನಸಾಗಿರುತ್ತೆ. ಹೀಗಾಗಿ ಸರ್ಕಾರಿ ಶಾಲೆಯ ಮಕ್ಕಳು ಸಹ ಯಾಕೆ ಇಂತಹ ಅನುಭವ ಪಡೆಯಬಾರದು ಎಂಬ ಉದ್ದೇಶದಿಂದ ಸರ್ಕಾರ ಬೇಸಿಗೆ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮ ರೂಪಿಸಿದ್ದು, ಸರ್ಕಾರಿ ಶಾಲೆಯ ಮಕ್ಕಳೂ ಸಹ ಸಮ್ಮರ್ ಕ್ಯಾಂಪ್ ಎಂಜಾಯ್ ಮಾಡುವಂತಾಗಿದೆ.
ರಾಜ್ಯ ಸರ್ಕಾರ 2017 ರಿಂದ ಸರ್ಕಾರಿ ಶಾಲೆಯ ಮಕ್ಕಳು ಸಹ ಸಮ್ಮರ್ ಕ್ಯಾಂಪ್ಗಳ ಅನುಭವ ಪಡೆಯಲಿ ಎಂಬ ಸದುದ್ದೇಶದಿಂದ ಬೇಸಿಗೆ ಸಂಭ್ರಮ ಎನ್ನುವ ವಿನೂತನ ಕಾರ್ಯಕ್ರಮ ರೂಪಿಸಿದೆ. ಬೇಸಿಗೆ ರಜೆಯಲ್ಲಿ ಸಮ್ಮರ್ ಕ್ಯಾಂಪ್ನ ಅನುಭವವನ್ನು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಸ್ವಲ್ಪ ಓದು, ಸ್ವಲ್ಪ ಮೋಜು ನೀಡುವುದು ಈ ಕಾರ್ಯಕ್ರಮದ ಉದ್ದೇಶ. ಈ ಬೇಸಿಗೆ ಸಂಭ್ರಮದಲ್ಲಿ 6 ಮತ್ತು 7ನೇ ತರಗತಿಯ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತದೆ.
ಜಿಲ್ಲೆಯಲ್ಲಿ ಬಿಸಿಯೂಟ ಪ್ರಾರಂಭವಿರುವ ಶಾಲೆಗಳಲ್ಲಿ ಈ ಬೇಸಿಗೆ ಸಂಭ್ರಮ ನಡೆಯುತ್ತಿದ್ದು ಮಕ್ಕಳು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸಂಭ್ರಮದಲ್ಲಿ ಪಠ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಜೀವನದ ಭಾಗವಾಗಿರುವ ಅನೇಕ ವಿಷಯಗಳ ಕುರಿತು ಹಾಗೂ ಪಾಠದೊಂದೊಗೆ ಆಟವಾಡುತ್ತಾ ಮಕ್ಕಳು ಖುಷಿ ಖುಷಿಯಿಂದ ಬೇಸಿಗೆಯನ್ನು ಕಳೆಯುತ್ತಿದ್ದಾರೆ.
ಇಷ್ಟು ದಿನ ತರಗತಿಯಲ್ಲಿ ಬರೀ ಪಾಠಗಳನ್ನು ಕೇಳಿ ಕೇಳಿ ಬೋರ್ ಆಗುತ್ತಿತ್ತು. ಈಗ ಬೇರೆ ಬೇರೆ ವಿಷಯಗಳ ಕುರಿತು ತಿಳುವಳಿಕೆ ಹಾಗೂ ಆಟ, ಹಾಡು, ನೃತ್ಯವನ್ನು ಈ ಬೇಸಿಗೆ ಶಿಬಿರದಲ್ಲಿ ಕಲಿಸಲಾಗುತ್ತಿದೆ. ಹೀಗಾಗಿ ಬೇಸಿಗೆ ಸಂಭ್ರಮ ಖುಷಿ ನೀಡುತ್ತಿದೆ ಎಂದು ವಿದ್ಯಾರ್ಥಿನಿಯೊಬ್ಬಳು ಅಭಿಪ್ರಾಯ ಹಂಚಿಕೊಂಡಳು.
ಇನ್ನು ಬೇಸಿಗೆ ಸಂಭ್ರಮ ಈಗಾಗಲೇ ಆರಂಭವಾಗಿದ್ದು ಮಕ್ಕಳಿಗೆ ಮೇ 25 ಕ್ಕೆ ಮುಕ್ತಾವಾಗಲಿದೆ. ಬೇಸಿಗೆ ಸಂಭ್ರಮದಲ್ಲೊ ಮಕ್ಕಳಿಗೆ ಹಾಡು, ನೃತ್ಯದ ಜೊತೆಗೆ ಆರೋಗ್ಯ, ಕುಟುಂಬ ವ್ಯವಸ್ಥೆ ಹಾಗೂ ಪರಿಸರ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮಕ್ಕಳಿಗೆ ತಿಳುವಳಿಕೆ ನೀಡಲಾಗುತ್ತದೆ.