ಕೊಪ್ಪಳ : ಬಿರುಬಿಸಿಲಿನ ನಾಡು ಕೊಪ್ಪಳ ಈಗ ಹಚ್ಚ ಹಸಿರಾಗಿದೆ. ಅದರಲ್ಲೂ ಕೊಪ್ಪಳ ನಗರಕ್ಕೆ ಮುಕುಟಪ್ರಾಯದಂತಿರುವ ಆಕರ್ಷಕ ಜಿಲ್ಲಾಡಳಿತ ಭವನ ಹಸಿರ ಸಿರಿಯಿಂದಾಗಿ ಆಹ್ಲಾದಕರ ಅನುಭವ ನೀಡುತ್ತಿದೆ.
ಆಗಾಗ ಸುರಿಯುವ ಮಳೆ, ತಂಪಾದ ವಾತಾವರಣದಿಂದಾಗಿ ಕೊಪ್ಪಳದ ಜಿಲ್ಲಾಡಳಿತ ಭವನದ ಇಡೀ ಆವರಣ ಹಸಿರಿನಿಂದ ನಳನಳಿಸುತ್ತಿದೆ. ಜಿಲ್ಲಾಡಳಿತ ಭವನಕ್ಕೆ ಬರುವವರಿಗೆ ಇಲ್ಲಿನ ವಾತಾವರಣ ತಂಪಾದ ಅನುಭವ ನೀಡುತ್ತಿದೆ.
ಕಳೆದ ಫೆಬ್ರವರಿ ತಿಂಗಳಲ್ಲಿ ತೋಟಗಾರಿಕಾ ಇಲಾಖೆಯ ಉಸ್ತುವಾರಿಯಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಸುಮಾರು 28 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಉದ್ಯಾನವನ ಹಸಿರಿನಿಂದ ಕಂಗೊಳಿಸುತ್ತಿದೆ.
ಹಚ್ಚ ಹಸಿರಾದ ಹುಲ್ಲು, ಗಿಡಮರಗಳು, ಅಲಂಕಾರಿಕ ಸಸ್ಯಗಳು, ಅರಳಿ ನಿಂತಿರುವ ಬಣ್ಣ ಬಣ್ಣದ ನಾನಾ ನಮೂನೆಯ ಹೂವುಗಳು, ಆಗಾಗ ಮೋಡ ಕವಿದ ವಾತಾವರಣದಿಂದ ಜಿಲ್ಲಾಡಳಿದ ಭವನದ ಅಂದ ದುಪ್ಪಟ್ಟಾಗಿದೆ.
ತಮ್ಮ ವಿವಿಧ ಕೆಲಸಗಳಿಗಾಗಿ ಬರುವ ಸಾರ್ವಜನಿಕರು ಹಾಗೂ ಜಿಲ್ಲಾಡಳಿತ ಭವನದ ವಿವಿಧ ಇಲಾಖೆಗಳ ಸಿಬ್ಬಂದಿಗೆ ಈ ವಾತಾವರಣ ಮನಸ್ಸಿಗೆ ಮುದ ನೀಡುತ್ತಿದೆ.