ಗಂಗಾವತಿ: ಆನೆಗೊಂದಿ ವಾಲೀಕಿಲ್ಲಾ ಆದಿಶಕ್ತಿ ಸನ್ನಿಧಾನದಲ್ಲಿ ಚಿರತೆ ದಾಳಿ ಮಾಡಿ ಯುವಕನನ್ನು ಸಾಯಿಸಿದ ಪ್ರಕರಣದಲ್ಲಿ ಚಿರತೆಯ ಜಾಡು ಹಿಡಿಯಲು ಅರಣ್ಯ ಇಲಾಖೆ ಎರಡನೇ ದಿನವಾದ ಶುಕ್ರವಾರವೂ ಕಾರ್ಯಾಚರಣೆ ಮುಂದುವರೆಸಿದೆ.
ಒಟ್ಟು ಐದು ಡ್ರೋನ್ ಕ್ಯಾಮೆರಾಗಳ ಸಹಾಯದಿಂದ ಸೆರೆಯಾಗುತ್ತಿರುವ ದೃಶ್ಯಗಳನ್ನು ವಿಶ್ಲೇಷಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯ ಜಾಡಿಗಿಂತಲೂ ಕ್ಯಾಮೆರಾದಲ್ಲಿ ಸೆರೆಯಾಗುತ್ತಿರುವ ನಿಸರ್ಗದ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಐನೂರು ಅಡಿಯಷ್ಟು (ಅರ್ಧ ಕಿಲೋ ಮೀಟರ್) ಮೇಲಕ್ಕೆ ಹಾರಾಟ ಮಾಡುತ್ತಿರುವ ಡ್ರೋನ್ ಕ್ಯಾಮೆರಾದಲ್ಲಿ ಆನೆಗೊಂದಿ ಸುತ್ತಲಿನ ರಮ್ಯ ಪರಿಸರ ಸೆರೆಯಾಗುತ್ತಿದೆ. ವಿಶಾಲ ಮೈದಾನದಲ್ಲಿ ಹಾಸಿದಂತಿರುವ ಕಲ್ಲು-ಬಂಡೆಗಳ ಬೆಟ್ಟ, ಇಳಿಜಾರು ಪ್ರದೇಶ, ನದಿ ನೀರಿನ ಹರಿವಿನ ಮನೋಜ್ಞ ದೃಶ್ಯಗಳು ಸೆರೆಯಾಗುತ್ತಿವೆ. ಇದು ಇಲಾಖೆಯ ಸಿಬ್ಬಂದಿ ಗಮನ ಸೆಳೆಯುವಂತೆ ಮಾಡಿದೆ.