ಕೊಪ್ಪಳ: ಇಂದು ಬೆಳಗ್ಗೆ ಕೊಪ್ಪಳ ನಗರದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿ ಜನರಲ್ಲಿ ಸಾಕಷ್ಟು ಆತಂಕ ಮೂಡಿಸಿತ್ತು. ಸದ್ಯ ಜನರಲ್ಲಿ ಆತಂಕ ಮೂಡಿಸಿದ್ದ ಈ ಕರಡಿ ಸೆರೆ ಸಿಕ್ಕಿದೆ.
ನಗರದ ಹಮಾಲರ ಕಾಲೋನಿ, ಎಪಿಎಂಸಿ, ಬಿ.ಟಿ.ಪಾಟೀಲ ನಗರ, ಕಾವ್ಯಾನಂದ ಉದ್ಯಾನವನದ ಪ್ರದೇಶ ಸೇರಿದಂತೆ ಹಲವು ಕಡೆ ಕರಡಿ ಓಡಾಡಿ ಆತಂಕ ಮೂಡಿಸಿತ್ತು. ಮಧ್ಯರಾತ್ರಿ 3 ಗಂಟೆ ಸುಮಾರಿಗೇನೆ ಕರಡಿ ನಗರಕ್ಕೆ ಎಂಟ್ರಿ ಕೊಟ್ಟಿತ್ತು ಎಂದು ಹೇಳಲಾಗುತ್ತಿದೆ. ಬೆಳಗ್ಗೆಯಿಂದಲೇ ಕರಡಿ ನಗರದಲ್ಲಿ ರಾಜಾರೋಷವಾಗಿ ಓಡಾಡುತ್ತಿರುವುದನ್ನು ಕಂಡು ಜನರು ಭಯಬೀತಗೊಂಡಿದ್ದರು. ಹುಡ್ಕೋ ಕಾಲೋನಿ ಬಳಿಯ ಪ್ರದೇಶದಲ್ಲಿನ ಜಾಲಿ ಕಂಟಿಯಲ್ಲಿ ಕರಡಿ ಹೋಗಿ ಅವಿತುಕೊಂಡಿತ್ತು.
ಕರಡಿ ಹಿಡಿಯಬೇಕಾದ ಸಾಮಗ್ರಿಗಳೊಂದಿಗೆ ಬರಬೇಕಾದ ಅರಣ್ಯ ಇಲಾಖೆಯ ಸಿಬ್ಬಂದಿ ಬರಿಗೈಯಲ್ಲಿ ಬಂದಿದ್ದರಿಂದ ಕರಡಿ ಹಿಡಿಯೋದು ಆರಂಭದಲ್ಲಿ ಕಷ್ಟವಾಯಿತು. ಈ ನಡುವೆ ಕರಡಿ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಜನರ ಕೇಕೆಗೆ ಭೀತಿಗೆ ಒಳಗಾದ ಕರಡಿಯು ಅಲ್ಲಿಂದ ಕಾಲ್ಕಿತ್ತು ಜಾಲಿ ಕಂಟಿಯ ಪಕ್ಕದ ಕಟ್ಟಡದ ಕಾಂಪೌಂಡ್ ಮೂಲಕ ಜಿಗಿದು ಕಾವ್ಯಾನಂದ ಪಾರ್ಕ್ ಬಳಿ ಅವಿತು ಕುಳಿತುಕೊಂಡಿತ್ತು. ಹೇಗಾದರೂ ಮಾಡಿ ಕರಡಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹರಸಾಹಸಪಟ್ಟಿತು. ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆಯಿಂದ ಕರಡಿ ಸೆರೆಸಿಕ್ಕ ಮೇಲೆ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಕರಡಿ ಹಿಡಿಯಲು ಬಂದಿದ್ದ ಹತ್ತಿಪ್ಪತ್ತು ಪರಿಣಿತ ಜನರು ಸುತ್ತಲೂ ಬಲೆ ಹಾಕಿದರು. ಈ ನಡುವೆ ಮಳೆ ಬಂದಿದ್ದರಿಂದ ಕಾರ್ಯಾಚರಣೆಗೆ ಕೊಂಚ ಅಡ್ಡಿ ಆಯ್ತು. ಬಳಿಕ ಅರವಳಿಕೆ ತಜ್ಞರನ್ನು ಕರೆಸಲಾಯಿತು. ಅರವಳಿಕೆ ನೀಡಿದ ಮೇಲೆ ಜಾಂಬವಂತ ರೋಷದಿಂದಲೇ ಸೆರೆಯಾದ. ಸತತ ನಾಲ್ಕು ಗಂಟೆಗಳ ಕಾಲ ಅಂದರೆ ಬೆಳಗ್ಗೆ 11ಕ್ಕೆ ಆರಂಭವಾದ ಕಾರ್ಯಾಚರಣೆ ಮಧ್ಯಾಹ್ನ 2 ಗಂಟೆಗೆ ಮುಗಿಯಿತು.
ಆಪರೇಷನ್ ಜಾಂಬವಂತ ತುಂಬಾ ಸವಾಲಿನ ಕೆಲಸವಾಗಿತ್ತು. ಏಕೆಂದರೆ ಕರಡಿಗೂ ಏನೂ ಆಗದಂತೆ ಹಾಗೂ ಕರಡಿಯಿಂದ ಜನರಿಗೂ ಏನೂ ಆಗದಂತೆ ಕೆಲಸ ಮಾಡಬೇಕಿತ್ತು. ಸಾಕಷ್ಟು ಜನರು ಸೇರಿದ್ದರಿಂದ ಅವರನ್ನು ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಪಟ್ಟರು.