ಕೊಪ್ಪಳ : ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಸುಮಾರು 600 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಕೊಳೆಯುತ್ತಿದೆ. ಅಲ್ಲದೇ, ಮತ್ತೊಂದು ಕಡೆ ಮಾರುಕಟ್ಟೆಯಲ್ಲಿ ಬೆಳೆಯ ದರವೂ ಕುಸಿತವಾಗಿದೆ.
ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಾಳೆ ಹಣ್ಣಿಗೆ ಉತ್ತಮ ಮಾರುಕಟ್ಟೆ ಹಾಗೂ ಒಳ್ಳೆಯ ಬೆಲೆ ಸಿಗುತ್ತದೆ ಎಂಬ ಆಶಯದೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿಯೂ ನೂರಾರು ರೈತರು ಬಾಳೆ ಬೆಳೆದಿದ್ದಾರೆ.
ಪಚ್ಚಬಾಳೆ ಕಾಯಿಗೆ ಪ್ರತಿ ಕೆಜಿಗೆ ಕೇವಲ 3 ರಿಂದ 5 ರೂಪಾಯಿ ಹಾಗೂ ಏಲಕ್ಕಿ ಬಾಳೆ ಪ್ರತಿ ಕೆಜಿಗೆ 20 ರೂಪಾಯಿಯಂತೆ ಮಾರಾಟವಾಗುತ್ತಿದೆ. ಅತ್ಯಂತ ಕಡಿಮೆ ದರಕ್ಕೆ ಮಾರಾಟ ಮಾಡಿದರೆ ರೈತನಿಗೆ ಮಾಡಿರುವ ಖರ್ಚಿನ ಅರ್ಧದಷ್ಟು ಹಣ ಸಹ ಬರುತ್ತಿಲ್ಲ. ಒಂದು ವರ್ಷಕ್ಕೆ ಒಂದು ಬೆಳೆ ಬರುವ ಬಾಳೆಯನ್ನು ಬೆಳೆಯಲು ರೈತ ಪ್ರತಿ ಎಕರೆಗೆ ಕನಿಷ್ಠ 1 ಲಕ್ಷ ರೂಪಾಯಿವರೆಗೂ ಖರ್ಚು ಮಾಡುತ್ತಾನೆ.
ಒಂದು ವೇಳೆ ಉತ್ತಮ ಇಳುವರಿ ಹಾಗೂ ದರ ಸಿಕ್ಕರೆ ಪ್ರತಿ ಎಕರೆಯಿಂದ 2 ಲಕ್ಷ ರೂಪಾಯಿಗೂ ಅಧಿಕ ಲಾಭ ಬರುತ್ತದೆ. ಇದೇ ನಿರೀಕ್ಷೆಯಲ್ಲಿ ಬೆಳೆಯಲಾಗಿರುವ ಬಾಳೆಯು ಅಧಿಕ ಮಳೆಯಿಂದಾಗಿ ಗೊನೆಯಲ್ಲಿರುವಾಗ ಹಾಳಾಗಿದೆ. ಕೆಲ ರೈತರ ಹೊಲದಲ್ಲಿ ಬಹುತೇಕ ಬಾಳೆ ಕಾಯಿಗಳು ಟಿಸಿಲೊಡೆದಿವೆ.
ಒಂದು ವೇಳೆ ಈ ಬಾಳೆ ಗೊನೆಯನ್ನು ಕಟಾವು ಮಾಡದಿದ್ದರೆ, ಎಲ್ಲಾ ಬಾಳೆಯ ಕಾಯಿ ಹಾಳಾಗುತ್ತವೆ. ಇದರಿಂದಾಗಿ ಅರ್ಧಂಬರ್ಧ ಇಳುವರಿ ಬಂದಿರುವ ಬಾಳೆಯನ್ನು ರೈತರು ಕಟಾವು ಮಾಡುತ್ತಿದ್ದಾರೆ.
ಬಹುತೇಕ ರೈತರು ಬಾಳೆ ಕಟಾವು ಮಾಡದೆ ಹಾಗೆಯೇ ತೋಟದಲ್ಲಿ ಕೊಳೆಯುತ್ತಿದ್ದರೂ ಸುಮ್ಮನೆ ಇದ್ದಾರೆ. ದರವಿಲ್ಲದ ಕಾರಣದಿಂದ ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ಯಲ್ಲಪ್ಪರೆಡ್ಡಿ, ಚೆನ್ನಪ್ಪ ರೆಡ್ಡಿ ಚುಕನಕಲ್ ಸೇರಿ ಅನೇಕ ರೈತರು ತಮ್ಮ ಬಾಳೆ ತೋಟದ ಗಿಡದಲ್ಲಿಯೇ ಹಣ್ಣಾಗಿ ಕೊಳೆಯುತ್ತಿದ್ದರೂ ಕಟಾವು ಮಾಡುತ್ತಿಲ್ಲ. ಕಟಾವು ಮಾಡಲು ಮತ್ತೆ ಕೂಲಿಯಾಳಿಗೆ ಹಣ ಖರ್ಚು ಮಾಡಬೇಕಾಗಿರುವುದರಿಂದ ಬೇಸತ್ತು ಈ ರೈತರು ಬಾಳೆ ಕಟಾವು ಮಾಡದೆ ಹಾಗೆಯೇ ಬಿಟ್ಟಿದ್ದಾರೆ.
ಈ ಬಾರಿ ಅಧಿಕ ಮಳೆಯಿಂದಾಗಿ ಬಾಳೆ ಬೆಳೆ ಹಾಳಾಗಿದೆ. ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಮಳೆ ನೀರು ಬಸಿದು ಹೋಗುವಂತೆ ಮಾಡಬೇಕು. ಇನ್ನು, ಕೆಲವು ರೈತರು ಸ್ಥಳೀಯವಾಗಿ ರೈತರ ಗುಂಪು ಮಾಡಿಕೊಂಡು ಮಾರುಕಟ್ಟೆಯಲ್ಲಿ ತಾವೇ ನೇರವಾಗಿ ಮಾರಾಟ ಮಾಡುತ್ತಿದ್ದಾರೆ.
ಇದರಿಂದಾಗಿ ಸಾಕಷ್ಟು ಜನ ರೈತರು ಹಾನಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಉಳಿದ ರೈತರು ನೇರ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಸೂಕ್ತ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ರೈತರಿಗೆ ಸಲಹೆ ನೀಡಿದ್ದಾರೆ.
ಓದಿ: ಪಿಸು ಮಾತಲ್ಲಿ ಅರ್ಥವಿಲ್ಲ, ಉಗ್ರಪ್ಪ ಕಂಪ್ಲೇಂಟ್ ಕೊಡಲಿ: ಗೃಹ ಸಚಿವ ಆರಗ ಜ್ಞಾನೇಂದ್ರ