ಕೊಪ್ಪಳ: ನಾಡಹಬ್ಬ ದಸರಾ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಸೋಮವಾರ ಆಯುಧ ಪೂಜಾ ಸಂಭ್ರಮ ಜೋರಾಗಿತ್ತು. ಜಿಟಿಜಿಟಿ ಮಳೆಯ ನಡುವೆಯೂ ಜನರು ಆಯುಧ ಪೂಜೆಗಾಗಿ ಬೇಕಾಗುವ ಪೂಜಾ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದರು.
ಕುಂಬಳಕಾಯಿ ಒಂದಕ್ಕೆ 50 ರೂಪಾಯಿ ದರವಿದ್ದರೆ ನಿಂಬೆ ಹಣ್ಣಿನ ದರವೂ ಹೆಚ್ಚಾಗಿದ್ದು, ಜಿಲ್ಲೆಯಾದ್ಯಂತ ಮಳೆ ಜಿಟಿಜಿಟಿಯಾಗಿ ಸುರಿಯಿತು. ನಗರದಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದಿಂದ ನೆರವೇರಿಸಲಾಯಿತು. ಪೊಲೀಸ್ ಇಲಾಖೆಯ ವಾಹನಗಳನ್ನು ತೊಳೆದು ಹೂಗಳು ಹಾಗೂ ಬಾಳೆ ಕಂದನ್ನು ಕಟ್ಟಿ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.
ಇನ್ನು ರೈಫಲ್ ಗಳಿಗೆ ಪೂಜೆ ನೆರವೇರಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರು ಪೂಜೆ ಸಲ್ಲಿಸಿದರು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಯುಧ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಒಟ್ಟಾರೆಯಾಗಿ ಮಳೆಯ ನಡುವೆಯೂ ಜಿಲ್ಲೆಯಲ್ಲಿ ಆಯುಧ ಪೂಜೆ ಸಡಗರ ಮನೆ ಮಾಡಿತ್ತು.