ಕುಷ್ಟಗಿ (ಕೊಪ್ಪಳ): ತಾಲೂಕಿನ ಮನ್ನೇರಾಳ ಗ್ರಾಮದಲ್ಲಿ ಕೊರೊನಾ ನಿಯಮ ಉಲ್ಲಂಘಿಸಿ ದುರ್ಗಾದೇವಿ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಿದ್ದು, ತಡೆಯಲು ಬಂದ ಪೊಲೀಸರ ಮೇಲೆ ಭಕ್ತಾಧಿಗಳು ಹಲ್ಲೆಗೆ ಮುಂದಾಗಿದ್ದಾರೆ. ಈ ಸಂಬಂಧ 84 ಜನ ಭಕ್ತಾದಿಗಳ ವಿರುದ್ದ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಮಂಗಳವಾರ ರಾತ್ರಿ ಮನ್ನೇರಾಳ ದುರ್ಗಾದೇವಿ ದೇವಸ್ಥಾನದಲ್ಲಿ ಕೋವಿಡ್ ಮಾರ್ಗಸೂಚಿ ಕಡೆಗಣಿಸಿ ದುರ್ಗಾದೇವಿ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಸಾವಿರಕ್ಕೂ ಅಧಿಕ ಜನ ಸಾಮಾಜಿಕ ಅಂತರವಿಲ್ಲದೇ ಸೇರಿದ್ದರು. ವಿಷಯ ತಿಳಿದು ಪೋಲಿಸರು ನಿಯಂತ್ರಿಸಲು ಮುಂದಾಗಿದ್ದಾರೆ. ಈ ವೇಳೆ, ಮಾತಿಗೆ ಮಾತು ಬೆಳೆದು ವಾಗ್ವಾದ ಉಂಟಾಗಿದೆ. ಉದ್ರಿಕ್ತಗೊಂಡ ಭಕ್ತಾಧಿಗಳು ನಿಯಂತ್ರಿಸಲು ಬಂದ ಪೊಲೀಸರನ್ನು ತಳ್ಳಾಡಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಬಳಿಕ ಹನುಮಸಾಗರ ಪಿಎಸ್ಐ ಅಶೋಕ ಬೇವೂರು, ಜಿಲ್ಲಾ ಪೊಲೀಸ್ ಸಶಸ್ತ್ರ ಪಡೆ ದೌಡಾಯಿಸಿ ಪರಿಸ್ಥಿ ಹತೋಟಿಗೆ ತರಲಾಗಿದೆ. ನಂತರ ದೇವಸ್ಥಾನಕ್ಕೆ ಬೀಗ ಜಡಿಯಲಾಗಿದ್ದು, ಸಾರ್ವಜನಿಕರ ಪ್ರವೇಶ ಸಂಪೂರ್ಣ ನಿಯಂತ್ರಿಸಲಾಗಿದೆ. ಘಟನೆ ಸಂಬಂಧ ದೇವಸ್ಥಾನದ ಪೂಜಾರಿ ಸೇರಿದಂತೆ 84 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಶಾಸಕರಿಗೆ ಘೇರಾವ್ ಯತ್ನ
ಈ ಸಂಬಂಧ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು, ಗುರುವಾರ ಸದರಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನ್ಯಾಯ ಇತ್ಯರ್ಥಗೊಳಿಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದು ಕಾರನ್ನು ನಿರ್ಬಂಧಿಸಿದ್ದರು.