ಗಂಗಾವತಿ: ಹುಲ್ಲು ಮೇಯುತ್ತಾ ಹೊಲಕ್ಕೆ ಆಕಳು ನುಗ್ಗಿದ್ದು ಜಮೀನು ಮಾಲೀಕ ದಲಿತ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಇದೀಗ ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸಿರುವ ಕನಕಗಿರಿ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕನಕಗಿರಿ ತಾಲ್ಲೂಕಿನ ರಾಂಪೂರ ಗ್ರಾಮದ ಅಮರೇಶಪ್ಪ ಕಲ್ಲಪ್ಪ ಕುಂಬಾರ ಪ್ರಕರಣದ ಆರೋಪಿ.
ಮಹಿಳೆ ನೀಡಿದ ಹಲ್ಲೆ, ಜಾತಿ ನಿಂದನೆ ದೂರಿನ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿದ್ದ ಕನಕಗಿರಿ ಪೊಲೀಸರು ಆರೋಪಿ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಗಾಯಾಳು ಮಹಿಳೆಯನ್ನು ಶೋಭಾ ರಮೇಶ ಪೂಜಾರ (30) ಎಂದು ಗುರುತಿಸಲಾಗಿದೆ. ಕನಕಗಿರಿಯ ಸಮುದಾಯ ಆಸ್ಪತ್ರೆಯಲ್ಲಿ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಯ ಸಾರ್ವಜನಿಕ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆಯ ವಿವರ: ಶೋಭಾ ಅವರಿಗೆ ಸೇರಿದ್ದ ಆಕಳು ಹುಲ್ಲು ಮೇಯುತ್ತಾ ಸಮೀಪದ ಅಮರೇಶಪ್ಪ ಕುಂಬಾರ ಎಂಬುವವರ ಹೊಲಕ್ಕೆ ನುಗ್ಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಅಮರೇಶಪ್ಪ ಆಕಳನ್ನು ಹಿಡಿದು ತಂದು ತಮ್ಮ ಮನೆಯ ಮುಂದೆ ಕಟ್ಟಿಹಾಕಿದ್ದರು. ಇದನ್ನು ಕೇಳಲು ಹೋದ ಶೋಭಾ ಅವರ ಮೇಲೆಯೇ ಅಮರೇಶಪ್ಪ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ತಕ್ಷಣಕ್ಕೆ ಸಮೀಪದಲ್ಲಿದ್ದವರು ಬಂದು ಶೋಭಾ ಅವರನ್ನು ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕನಕಗಿರಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ, ದೌರ್ಜನ್ಯ, ಹಲ್ಲೆ ಮಾಡಿರುವ ಬಗ್ಗೆ ಶೋಭಾ ದೂರು ದಾಖಲಿಸಿದ್ದರು. ಹಲ್ಲೆಯ ದೃಶ್ಯವನ್ನು ಕೆಲವರು ಮೊಬೈಲ್ನಲ್ಲಿ ಸೆರೆಹಿಡಿದಿದ್ದರು.
ಇದನ್ನೂ ಓದಿ: ಕೊಪ್ಪಳ: ದಲಿತರ ಮೇಲೆ ಹಲ್ಲೆ ಪ್ರಕರಣ... ಆರೋಪಿಗಳ ಬಂಧನಕ್ಕೆ ಆಗ್ರಹ