ಗಂಗಾವತಿ: ಅಂಜನಾದ್ರಿಯ ವಿಚಾರವಾಗಿ ಟಿಟಿಡಿ ಹುಟ್ಟುಹಾಕಿರುವ ಸ್ಥಳ ಗೊಂದಲದ ಪರಿಹಾರಕ್ಕೆ ಒತ್ತಾಯಿಸಿ ಸಿಎಂಗೆ ಪತ್ರ ಬರೆಯುವುದಾಗಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ, ಹನುಮಂತ ದೇವರ ಹುಟ್ಟಿದ್ದು ಅಂಜನಾದ್ರಿ ಬೆಟ್ಟದಲ್ಲಿ ಎಂಬ ಹಿನ್ನೆಲೆ ಇದನ್ನು ದೊಡ್ಡ ಧಾರ್ಮಿಕ ತಾಣವಾಗಿ ಪರಿವರ್ತಿಸಲು ಸರ್ಕಾರ ಈಗಾಗಲೇ 20 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನು 200 ಕೋಟಿ ರೂಪಾಯಿ ಮೊತ್ತದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಉದ್ದೇಶಿಸಿದೆ. ಇಂತಹ ಸಂದರ್ಭದಲ್ಲಿ ಭಕ್ತರ ಧಾರ್ಮಿಕ ಹಾಗೂ ಐತಿಹಾಸಿಕ ನಂಬಿಕೆಯ ಮೇಲೆ ಟಿಟಿಡಿ ಸಲ್ಲದ ಘಾಸಿ ಮಾಡುತ್ತಿದೆ ಎಂದು ಶಾಸಕರು ಆರೋಪಿಸಿದರು.
ಗಂಗಾವತಿಯದ್ದೇ ಅಂಜನಾದ್ರಿ ಎಂಬುವುದಕ್ಕೆ ರಾಮಾಯಣದ ಕಾಲದಿಂದಲೂ ಸಾಕಷ್ಟು ದಾಖಲೆಗಳಿವೆ. ಈ ಬಗ್ಗೆ ಈಗಾಗಲೇ ಸರ್ಕಾರವೇ ಅಂಜನಾದ್ರಿ ಎಂದರೆ ಕಿಷ್ಕಿಂಧೆಯಲ್ಲಿರುವುದು ಎಂದು ತಿಳಿಸಿದೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಅಲ್ಲದೇ ಗೊಂದಲ ಪರಿಹಾರಕ್ಕೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಆದಷ್ಟು ಶೀಘ್ರ ಅಂಜನಾದ್ರಿಯಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಕಾಮಗಾರಿಗಳ ಮುಂಚೆಯೇ ವಿವಾದಕ್ಕೆ ತೆರೆ ಎಳೆಯುವ ಯತ್ನ ಮಾಡಲಾಗುವುದು ಎಂದರು.
ಸರ್ಕಾರಕ್ಕೆ ಸಂಶೋಧಕ ಸಲಹೆ
ಅಂಜನಾದ್ರಿ ಹಾಗೂ ಆಂಜನೇಯನ ಜನ್ಮ ಸ್ಥಳದ ವಿಚಾರವಾಗಿ ಟಿಟಿಡಿ ಹುಟ್ಟುಹಾಕಿರುವ ಗೊಂದಲ ಪರಿಹಾರಕ್ಕೆ ನಾನಾ ಕ್ಷೇತ್ರದಲ್ಲಿನ ತಜ್ಞರನ್ನೊಳಗೊಂಡ ಅಧ್ಯಯನ ಸಮಿತಿ ರಚಿಸುವಂತೆ ಖ್ಯಾತ ಸಂಶೋಧಕ, ಇತಿಹಾಸಕಾರ ಡಾ. ಶರಣಬಸಪ್ಪ ಕೋಲ್ಕಾರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಸಂಸ್ಕೃತ ಪಂಡಿತರು, ಪುರಾತತ್ವ ಶಾಸ್ತ್ರಜ್ಞರು, ಇತಿಹಾಸ ತಜ್ಞರು, ಶಿಲಾಶಾಸನ ತಜ್ಞ ಹಾಗೂ ಜಾನಪದ ತಜ್ಞರನ್ನೊಳಗೊಂಡಂತೆ ಒಂದು ಸಮಿತಿ ರಚಿಸಿ ಆಂಜನೇಯನ ಜನ್ಮ ಸ್ಥಳ, ಕಿಷ್ಕಿಂಧೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲಿ. ಎಲ್ಲ ಪುರಾವೆಗಳನ್ನು ಕ್ರೋಢೀಕರಿಸಿ ಒಂದು ಸಂಶೋಧನಾತ್ಮಕ ಗ್ರಂಥವನ್ನಾಗಿ ಪ್ರಕಟಿಸಬೇಕಾದ ಕಾರ್ಯ ತುಂಬ ತುರ್ತಾಗಿ ಆಗಬೇಕಿದೆ. ಸ್ಥಳೀಯ ಶಾಸಕರು ಈ ಬಗ್ಗೆ ಕೂಡಲೇ ಗಮನ ಹರಿಸಿ ಸರ್ಕಾರಕ್ಕೆ ಒತ್ತಾಯಿಸಿ ಸಮಿತಿ ರಚಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.