ಗಂಗಾವತಿ: ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಬಹುತೇಕರು ಅಖಾಡಕ್ಕೆ ಇಳಿಯುತ್ತಾರೆ. ಸೋತರೆ ಹ್ಯಾಪುಮೋರೆ ಹಾಕಿಕೊಂಡು ಸೋಲಿನ ಕಹಿಘಟನೆಯಿಂದ ಹೊರಕ್ಕೆ ಬರಲು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಅಭ್ಯರ್ಥಿ ಸೋತಿದ್ದಕ್ಕೆ ಖುಷಿಯಾಗಿದೆ ಎಂದು ಹೇಳುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ.
ತಾಲ್ಲೂಕಿನ ಆನೆಗೊಂದಿ ಗ್ರಾಮ ಪಂಚಾಯಿತಿಯ ಎರಡನೇ ವಾರ್ಡ್ನಿಂದ ಗೆಲುವು ಬಯಸಿ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದ ಫ್ರಾನ್ಸ್ ಸಂಜಾತೆ (ಈಕೆಯ ತಾಯಿ ಫ್ರಾನ್ಸ್ ನಾಗರಿಕಳು) ಅಂಜನಾದೇವಿ. ಈ ಹಿಂದೆ ಅಧ್ಯಕ್ಷೆಯಾಗಿ ಸಾಕಷ್ಟು ಕೆಲಸ ಮಾಡಿ ಗಮನ ಸೆಳೆದಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಕಣಕ್ಕೆ ಇಳಿಯಬಾರದು ಎಂದು ನಿರ್ಧಾರ ಮಾಡಿದ್ದರು. ಆದರೆ ಗ್ರಾಮದ ಹಿರಿಯರು ಹಾಗೂ ಯುವಕರು ಒತ್ತಾಯಪೂರ್ವಕವಾಗಿ ನನ್ನನ್ನು ಅಖಾಡಕ್ಕೆ ಇಳಿಸಿದ್ದರು. ಸೋಲಿನಿಂದ ಯಾವುದೇ ಹತಾಶೆಯಾಗಿಲ್ಲ, ಬದಲಿಗೆ ಖುಷಿಯಾಗಿದೆ. ನಮ್ಮೂರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಮತ್ತೊಬ್ಬರಿಗೆ ಅವಕಾಶ ಸಿಕ್ಕಿದೆ ಎಂಬ ಸಂತಸವಾಗಿದೆ. ಆದರೆ ಗೆದ್ದವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನಾನುರಾಗಿ ಆಡಳಿತ ನೀಡಬೇಕು ಎಂದು ಮನವಿ ಮಾಡಿದ ವಿಡಿಯೋವನ್ನು ಶೇರ್ ಮಾಡಿದ್ದಾರೆ.