ಗಂಗಾವತಿ: ತಾಲೂಕಿನ ಆನೆಗೊಂದಿಯಲ್ಲಿ ಜನವರಿ 9 ಮತ್ತು 10ರಂದು ನಡೆಯಲಿರುವ 2020ರ ಉತ್ಸವದ ಸಿದ್ಧತೆಯ ಭಾಗವಾಗಿ, ಗ್ರಾಮದ ಸ್ಮಾರಕ ಹಾಗೂ ಐತಿಹಾಸಿಕ ಸ್ಥಳಗಳ ಸ್ವಚ್ಛತೆ ಅಭಿಯಾನಕ್ಕಾಗಿ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಡಿ. ಮೋಹನ್ ನೇತೃತ್ವದಲ್ಲಿ ಚಾರಣ ಬಳಗದ ಸಂಚಾಲಕ ಶಿವಕುಮಾರ ಮಾಲಿ ಪಾಟೀಲ್, ಹಿರಿಯ ಸಂಶೋಧಕ ಶರಣಬಸಪ್ಪ ಕೋಲ್ಕಾರ ಮೊದಲಾದವರು ಸ್ಥಳ ಪರಿಶೀಲಿಸಿದರು. ಗ್ರಾಮದಲ್ಲಿ ಎಲ್ಲೆಂದರಲ್ಲಿ ಪಾಳು ಬಿದ್ದಿರುವ ಐತಿಹಾಸಿಕ ಸ್ಥಳ, ಸ್ಮಾರಕ, ಮುಖ್ಯರಸ್ತೆಯಲ್ಲಿನ ಮಂದಿರ ಮಠ ಮೊದಲಾದ ಅವಶೇಷಗಳನ್ನು ಪತ್ತೆ ಹಚ್ಚಿದರು. ಡಿಸೆಂಬರ್ 19 ಅಥವಾ 20ರಿಂದ ಸ್ವಚ್ಛತಾ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅಭಿಯಾನ ಆರಂಭಿಸಲಾಗುವುದು ಎಂದು ತಿಳಿಸಿದರು.