ಕುಷ್ಟಗಿ(ಕೊಪ್ಪಳ): ಯಾವುದೇ ಪಕ್ಷದ ಸರ್ಕಾರಗಳು ಬಂದರೂ ಜನರಿಗೆ ಕೊಡುವ ಯೋಜನೆಗಳು ನಿಗದಿತ ಅವಧಿಯಲ್ಲೇ ಮತದಾರರಿಗೆ ತಲುಪಬೇಕು. ಅಂದಾಗ ಮಾತ್ರ ಜನರು ಆ ಪಕ್ಷವನ್ನು ಗುರುತಿಸುತ್ತಾರೆ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
ಕುಷ್ಟಗಿ ತಾಲೂಕಿನ ತಾವರಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ, 88.16 ಕೋಟಿ ರೂ. ವೆಚ್ಚದಲ್ಲಿ ತುರುವಿಹಾಳ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಸರಬರಾಜು ಕಲ್ಪಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಈಗಿನ ಮತದಾರರು ಜಾಗೃತರಾಗಿದ್ದಾರೆ. ಕೇವಲ ವೇದಿಕೆಗೆ ಬಂದು ಆಶ್ವಾಸನೆ ಕೊಟ್ಟು ಘೋಷಣೆ ಕೂಗಿ, ಜನರನ್ನು ಕರೆ ತಂದು ದೊಡ್ಡ ಕಾರ್ಯಕ್ರಮ ಮಾಡಿ ಗೆಲ್ಲುವ ಆಲೋಚನೆ ಮಾಡಿದರೆ ಅದು ಮೂರ್ಖತನವಾದೀತು ಎಂದರು. ಯಾರಿಗೆ ಮತದಾನ ಮಾಡಬೇಕೆಂಬುದು ಜನರಿಗೆ ಗೊತ್ತಿದೆ ಎಂದರು.
ಇದನ್ನೂ ಓದಿ: ಅಂದು ಗಾಂಧೀಜಿ ಹೇಳಿದ್ದ ಮಾತನ್ನು ಇಂದು ಮೋದಿ ಜಾರಿಗೆ ತರುತ್ತಿದ್ದಾರೆ: ಸಚಿವ ಈಶ್ವರಪ್ಪ
ತಾವರಗೇರಾ ಪಟ್ಟಣಕ್ಕೆ ಈ ಯೋಜನೆ ಈ ಹಿಂದೆಯೇ ಆಗಿತ್ತು. ಇದೀಗ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷ ಚಾಲನೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಯಾರು ಘೋಷಿಸಿದರು? ಅನ್ನೋದು ಮುಖ್ಯ ಅಲ್ಲ. ಯಾರು ಮಾಡಿದ್ದಾರೆ ಅನ್ನೋದೇ ಮುಖ್ಯವಾಗಿರುತ್ತದೆ. ನೆನೆಗುದಿಗೆ ಬಿದ್ದ ಯೋಜನೆಯನ್ನು ಶಾಸಕ ರಾಜೂಗೌಡರೇ ಚಾಲನೆ ನೀಡಿದ್ದಾರೆಂದು ನಾನು ಹೇಳುವೆ.
ಇಲ್ಲಿ ನಾನು ರಾಜ್ಯಪಾಲ ಇದ್ದಂತೆ: ವಿಜಯನಗರ ಜಿಲ್ಲೆಯಲ್ಲಿ ಗೊತ್ತಿರುವಷ್ಟು ರಾಜಕೀಯ ವ್ಯತ್ಯಾಸ ಕೊಪ್ಪಳ ಜಿಲ್ಲೆಯಲ್ಲಿ ಗೊತ್ತಾಗುವುದಿಲ್ಲ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವನಾಗಿ ರಾಜ್ಯಪಾಲರಂತೆ ಕೆಲಸ ನಿರ್ವಹಿಸುವಂತಾಗಿದೆ ಎಂದು ಆನಂದ್ ಸಿಂಗ್ ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.
ನನಗೆ ಕೊಪ್ಪಳ ಜಿಲ್ಲೆ ಉಸ್ತುವಾರಿ ಜವಾಬ್ದಾರಿ ಕೊಟ್ಟಿದ್ದಾರೆ. ಆದರೆ ನನ್ನ ತವರು ಜಿಲ್ಲೆಯಾಗಿದ್ದರೆ ಬಹಳಷ್ಟು ರಾಜಕೀಯ ವ್ಯತ್ಯಾಸ ಗೊತ್ತಾಗುತ್ತಿದ್ದವು. ಇಲ್ಲಿ ನಾನು ರಾಜ್ಯಪಾಲ ಇದ್ದಂತೆ, ಇಲ್ಲಿ ಸೀಲ್ ಹಾಕಿ ಕೊಡಬೇಕಷ್ಟೆ. ಈ ಜಿಲ್ಲೆಯಲ್ಲಿ ನನ್ನದು ರಾಜ್ಯಪಾಲರ ಕೆಲಸ ಅಷ್ಟೇ. ನನಗೆ ವಿಶ್ವಾಸ ಮುಖ್ಯ, ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಸಹಕಾರ ನೀಡುವ ವಿಶ್ವಾಸವಿದೆ ಎಂದರು.