ಕುಷ್ಟಗಿ(ಕೊಪ್ಪಳ): ಬೆಲೆ ಏರಿಕೆ, ಬರಗಾಲ, ಕೊರೊನಾದಂತಹ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಸಂಬಂಧ ಅಯ್ಯಯ್ಯೋ ಎನ್ನುವ ಬದಲಿಗೆ ಬಿಜೆಪಿ ಬಿಜೆಪಿ ಎಂದು ಬೊಬ್ಬಿಡುವಂತಾಗಿದೆ ಜನರ ಪರಿಸ್ಥಿತಿ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕಳವಳ ವ್ಯಕ್ತಪಡಿಸಿದರು.
ಕುಷ್ಟಗಿ ಪಟ್ಟಣದ 1ನೇ ವಾರ್ಡ್ನ ಸಂತ ಶಿಶುನಾಳ ಷರೀಪ ಕಾಲೋನಿಯಲ್ಲಿ ಕೊರೊನಾ ನಿಯಂತ್ರಣದ ಲಾಕ್ಡೌನ್ ಹಿನ್ನೆಲೆ ಬಡ ವರ್ಗದವರಿಗೆ ದಿನಸಿ ಕಿಟ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿಯವರು 7 ದಶಕದಲ್ಲಿ ಮಾಡದ ಕೆಲಸವನ್ನು 7 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಲಾವಧಿಯಲ್ಲಾಗಿದೆ ಎನ್ನುವುದು ತೀರ ಹಾಸ್ಯಾಸ್ಪದ ಎಂದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಆಗಿನ ಸ್ಥಿತಿ ಏನಿತ್ತು, ನರೇಂದ್ರ ಮೋದಿ ಅವರ ಆಡಳಿತಾವಧಿಯ 7 ವರ್ಷಗಳಲ್ಲಿ ಏನಾಗಿದೆ ಎನ್ನುವುದು ಶ್ವೇತಪತ್ರ ಹೊರಡಿಸಬೇಕಿದೆ. ಬಿಜೆಪಿಯವರಿಗೆ ಚೆನ್ನಾಗಿ ಮಾತನಾಡುವುದು ಗೊತ್ತು ಅಷ್ಟೇ, ಯಾಮಾರಿಸುವುದು ಗೊತ್ತು ಎಂದು ವ್ಯಂಗ್ಯವಾಡಿದರು.
ಬಿಜೆಪಿ ಗೊಂದಲಗಳನ್ನು ಸೃಷ್ಟಿಸಿ ಜನಪ್ರಿಯತೆಗಳಿಸಲು ಮುಂದಾಗಿದ್ದು, ಬಿಜೆಪಿಗರ ಅಗ್ಗದ ಜನಪ್ರಿಯತೆಗೆ ಜನರ ಪ್ರಾಣ ಹೋಗುವ ಪರಿಸ್ಥಿತಿ ಬಂದಿದೆ. ಬಿಜೆಪಿ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿದ್ದರೂ, ಕೊರೊನಾ ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ ಶಾಸಕರು, ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಸಾರ್ವಜನಿಕರಿಗೆ ಲಸಿಕೆ ನೀಡಲು ಸಾಧ್ಯವಾಗಿಲ್ಲ.
ಜನ ಕ್ಯೂನಲ್ಲಿ ನಿಂತು ಲಸಿಕೆ ಪಡೆಯುವಂತಾಗಿದ್ದು, 1 ಡೋಸ್ ಕೇವಲ 100 ರೂ. ಬೆಲೆಯ ವ್ಯಾಕ್ಸಿನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ ಶೇ.40ರಷ್ಟು ಜನ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯತೆ ಇತ್ತು. ಈ ಬಿಜೆಪಿಗೆ ಅದನ್ನು ಮಾಡಲು ಸಾದ್ಯವಾಗಿಲ್ಲ ಎಂದು ಟೀಕಿಸಿದರು.