ಕುಷ್ಟಗಿ (ಕೊಪ್ಪಳ) : ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸುರಕ್ಷತೆಯ ಬಗ್ಗೆ ಪಾಲಕರು ಹಾಗು ಮಕ್ಕಳಲ್ಲಿ ವಿಶ್ವಾಸ ತುಂಬಲು ಪರೀಕ್ಷೆಗೆ ಒಂದು ದಿನ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಲು ಈ ಬಾರಿ ಅವಕಾಶ ಮಾಡಿಕೊಡಲಾಗಿದೆ ಎಂದು ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಗ್ಗದ್ ತಿಳಿಸಿದರು.
ಪರೀಕ್ಷೆಯು ಜೂನ್ 25 ರಿಂದ ಆರಂಭವಾಗಲಿದ್ದು, ಆಸಕ್ತ ವಿದ್ಯಾರ್ಥಿಗಳು 24 ರಂದು ಸಂಜೆ 5 ಗಂಟೆಯವರೆಗೆ ತಮ್ಮ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ, ಗೊಂದಲ ಪರಿಹರಿಸಿಕೊಳ್ಳಬಹುದು. ಈ ಬಗ್ಗೆ ಎಲ್ಲರಿಗೂ ಈಗಾಗಲೇ ಕರೆ ಮಾಡಿ ಮಾಹಿತಿ ನೀಡಿದ್ದೇವೆ. ಮಕ್ಕಳು ಹಾಗೂ ಪಾಲಕರು ಬಂದು ವೀಕ್ಷಣೆ ಮಾಡಿದ ನಂತರ ಬುಧವಾರ ಸಂಜೆ 6 ರಿಂದ ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಮತ್ತೊಮ್ಮೆ ಸ್ಯಾನಿಟೈಸರ್ ಮಾಡಿ ಮರುದಿನದ ಪರೀಕ್ಷೆಗೆ ಸಿದ್ಧಗೊಳಿಸಲಾಗುವುದು ಎಂದರು.
ಕೋವಿಡ್–19 ಹರಡುವ ಭೀತಿ ಹಿನ್ನೆಲೆಯಲ್ಲಿ ಪರ–ವಿರೋಧದ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸುರಕ್ಷಿತ ಹಾಗೂ ಭಯ ರಹಿತವಾಗಿ ಪರೀಕ್ಷೆ ನಡೆಸಲು ತಾಲೂಕು ಆಡಳಿತ, ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಕೈಗೊಂಡಿದೆ ಎಂದರು.