ಕೊಪ್ಪಳ: ಮಾರಾಟಗಾರನೋರ್ವ ನೀಡಿದ್ದ ಬಿತ್ತನೆ ಬೀಜವನ್ನು ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ಕಂಗಾಲಾಗಿದ್ದಾರೆ. ಬಿತ್ತಿದ ಬೆಳೆ ಚೆನ್ನಾಗಿ ಬೆಳೆದು ಕಾಳು ಕಟ್ಟದೆ ಬರಡಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಬೀಜ ಮಾರಾಟಗಾರನ ವಿರುದ್ಧ ಕಳಪೆ ಬೀಜ ನೀಡಿರುವ ಆರೋಪ ಕೇಳಿ ಬಂದಿದೆ. ತಾಲೂಕಿನ ಭೈರಾಪುರ ಗ್ರಾಮದ ಕೆಲ ರೈತರು ಅಳವಂಡಿಯ ಗವಿಸಿದ್ದಪ್ಪ ಹರಪನಳ್ಳಿ ಶೆಟ್ಟರ್ ಎಂಬುವವರ ಬಳಿ ಸೂರ್ಯಕಾಂತಿ ಬೀಜವನ್ನು ಖರೀದಿಸಿ ಬಿತ್ತನೆ ಮಾಡಿದ್ದರಂತೆ. ಬಿತ್ತಿದ್ದ ಸೂರ್ಯಕಾಂತಿ ಬೆಳೆದು ಕಾಳು ಕಟ್ಟಿಲ್ಲ.
'ಹತ್ತಾರು ಸಾವಿರ ರೂ. ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ರೈತರಿಗೆ ಅವರು ಕಳಪೆ ಬೀಜ ಮಾರಾಟ ಮಾಡಿದ್ದಾರೆ. ನಾವಷ್ಟೇ ಅಲ್ಲ, ಸುಮಾರು 200 ಎಕರೆಯಷ್ಟು ಜಮೀನಿನಲ್ಲಿ ಗವಿಸಿದ್ದಪ್ಪ ನೀಡಿರುವ ಕಳಪೆ ಬೀಜ ಬಿತ್ತನೆ ಮಾಡಲಾಗಿದೆ' ಎಂದು ರೈತರು ಆರೋಪಿಸಿದ್ದಾರೆ.
'ಸಾಲ ಮಾಡಿ ನಾವು ಬಿತ್ತನೆ ಮಾಡಿದ್ದೇವೆ. ಆದರೆ ಬೆಳೆ ಮಾತ್ರ ಬಂದಿಲ್ಲ. ಕಳಪೆ ಬೀಜ ಮಾರಾಟ ಮಾಡಿರುವ ಗವಿಸಿದ್ದಪ್ಪನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರ ಕೊಡಿಸಬೇಕು' ಎಂದು ರೈತರು ಆಗ್ರಹಿಸಿದರು.