ಕೊಪ್ಪಳ : ಕೃಷಿ ಪದ್ಧತಿ ವೈಜ್ಞಾನಿಕವಾಗಿರಬೇಕು. ರೈತರಿಗೆ ಮಣ್ಣು ಪರೀಕ್ಷೆ, ಬೆಳೆ ಸಮೀಕ್ಷೆ ಸೇರಿದಂತೆ ವಿವಿಧ ಉದ್ದೇಶಗಳ ಈಡೇರಿಕೆಗೆ ಆರಂಭಿಸಿದ್ದ ಕೃಷಿ ಸಂಜೀವಿನಿ ವಾಹನಗಳು ಅನುದಾನದ ಕೊರತೆಯಿಂದ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಲ್ಯಾಬ್ ಟು ಲ್ಯಾಂಡ್ ಎಂಬ ಧ್ಯೇಯದೊಂದಿಗೆ ಈ ವಾಹನಗಳನ್ನು ರಾಜ್ಯಾದ್ಯಂತ ನೀಡಲಾಗಿತ್ತು. ಆಗ ಕೃಷಿ ಸಚಿವರಾಗಿದ್ದ ಬಿ.ಸಿ.ಪಾಟೀಲ್ ಕೊಪ್ಪಳ ಜಿಲ್ಲೆಯಲ್ಲಿ ಹೋಬಳಿಗೊಂದರಂತೆ ಒಟ್ಟು 20 ವಾಹನಗಳನ್ನು ನೀಡಿದ್ದರು. ಈ ವಾಹನಗಳು ಕೃಷಿ ಭೂಮಿಗೆ ಹೋಗಿ ಬಂದಿದ್ದಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ನಿಂತಿವೆ. ಇದರಿಂದಾಗಿ ಸರ್ಕಾರದ ಕೋಟ್ಯಂತರ ರೂಪಾಯಿ ಹಣ ಪೋಲಾಗುತ್ತಿದೆ. ರೈತರಿಗೆ ವರದಾನವಾಗಬೇಕಿದ್ದ ಈ ಹೊಸ ಕಲ್ಪನೆಯ ವಾಹನಗಳು ಆರಂಭದಲ್ಲೇ ವಿಫಲವಾಗಿದೆ. ಸರ್ಕಾರ ಈಗಲಾದರೂ ವಾಹನಗಳಿಗೆ ತಜ್ಞರು, ಅಗತ್ಯ ಯಂತ್ರಗಳನ್ನು ನೀಡಿ ರೈತರಿಗೆ ಉಪಯೋಗವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಅನುದಾನದ ಕೊರತೆಯೇ ಕಾರಣ: ಜಿಲ್ಲೆಯ ಖನಿಜ ನಿಧಿಯಿಂದ ಸುಮಾರು 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ಸಂಜೀವಿನಿ ವಾಹನಗಳನ್ನು ಖರೀದಿಸಲಾಗಿದೆ. ಕೃಷಿ ಸಂಜೀವಿನಿ ವಾಹನದಲ್ಲಿ ಒಬ್ಬ ತಜ್ಞರು, ಒಬ್ಬ ಚಾಲಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ತಿಂಗಳಿಗೆ ಕೇವಲ 80 ಲೀಟರ್ ಡೀಸೆಲ್ ನೀಡಲಾಗುತ್ತದೆ. ಆದರೆ ಇದರ ನಿರ್ವಹಣೆಗೆ ಪ್ರತ್ಯೇಕ ಅನುದಾನವನ್ನು ಸರ್ಕಾರ ನೀಡುತ್ತಿಲ್ಲ. ಇದರಿಂದಾಗಿ ವಾಹನಗಳು ನಿಂತಲ್ಲೇ ನಿಂತಿವೆ.
ಹಿಂದಿನ ಬಿಜೆಪಿ ಸರ್ಕಾರ ಲ್ಯಾಬ್ ಟು ಲ್ಯಾಂಡ್ ಎಂಬ ಯೋಜನೆ ತಂದಿತ್ತು. ಕೃಷಿ ಸಂಜೀವಿನಿ ವಾಹನ ಬಂದು ಮಣ್ಣು ಪರೀಕ್ಷೆ ಹಾಗೂ ನೀರು ಪರೀಕ್ಷೆ ಮಾಡುತ್ತಿತ್ತು. ಮಣ್ಣಿನಲ್ಲಿ ಯಾವ ಅಂಶ ಇದೆ, ಯಾವ ಅಂಶ ಇಲ್ಲ, ಯಾವಾಗ ಬೀಜ ಬಿತ್ತನೆ ಮಾಡಬೇಕು. ಬೀಜೋಪಚಾರದ ಪ್ರತಿಯೊಂದು ಸಲಹೆಯನ್ನು ರೈತರಿಗೆ ಕೊಡುತ್ತಿದ್ದರು. ಇದನ್ನು ಪ್ರಸ್ತುತ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ಈ ಯೋಜನೆಯನ್ನು ಪುನಃ ಆರಂಭಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಯೋಜನೆ ಹಳ್ಳಿ ಜನರಿಗೆ ಬಹಳ ಉಪಯುಕ್ತವಾಗಿತ್ತು. ಮಣ್ಣು ಪರೀಕ್ಷೆ ಹಾಗೂ ನೀರು ಪರೀಕ್ಷೆ ಮಾಡುವುದರಿಂದ ನಮ್ಮ ಭೂಮಿಯಲ್ಲಿರುವ ಲವಣಾಂಶದ ಕೊರತೆ ಏನಿದೆ?. ಸೂಕ್ತವಾದ ಬೆಳೆ ಏನಿರಬೇಕು?. ಯಾವ ರೀತಿ ಕ್ರಿಮಿನಾಶಕ ಸಿಂಪಡಣೆ ಮಾಡಬೇಕು ಎಂಬುದನ್ನ ಹಿಂದಿನ ಸರ್ಕಾರ ತಂದಿತ್ತು. ಈಗಿನ ಸರ್ಕಾರ ಅದನ್ನು ನಿಲ್ಲಿಸಿದೆ. ಈ ಯೋಜನೆಯನ್ನು ಮರುಸ್ಥಾಪಿಸಬೇಕೆಂದು ರೈತರು ವಿನಂತಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೊಪ್ಪಳ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ, ಈ ವರ್ಷ ಅನುದಾನ ಕೊರತೆಯಿಂದಾಗಿ ವಾಹನಗಳನ್ನು ಓಡಿಸಲು ಆಗುತ್ತಿಲ್ಲ. ಲ್ಯಾಬ್ ಟೂ ಲ್ಯಾಂಡ್ ವಾಹನಗಳಿಗೆ ಪ್ರತ್ಯೇಕ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಸಂಚಾರಿ ಸಸ್ಯ ಚಿಕಿತ್ಸಾಲಯ 'ಕೃಷಿ ಸಂಜೀವಿನಿ' ವಾಹನಗಳಿಗೆ ಸಿಎಂ ಚಾಲನೆ