ಗಂಗಾವತಿ (ಕೊಪ್ಪಳ): ಲೇಔಟ್ ಮ್ಯಾಪಿನಲ್ಲಿ ರಸ್ತೆಯೇ ಇಲ್ಲದ ಸ್ಥಳದಲ್ಲಿ ನಗರಸಭೆಯ ಅಧಿಕಾರಿಗಳು, ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸಿಸಿ ರಸ್ತೆ ನಿರ್ಮಿಸುವ ಮೂಲಕ ಸರ್ಕಾರದ ಅನುದಾನ ದುರುಪಯೋಗ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇಲ್ಲಿನ ಪೊಲೀಸ್ ಕ್ವಾಟರ್ಸ್ಗೆ ಹೋಗುವ ದಾರಿಯಲ್ಲಿರುವ ಪೌರ ಕಾರ್ಮಿಕರ ವಸತಿ ಬಡಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರಸ್ತೆ ಇಲ್ಲದ್ದರಿಂದ ಅರಣ್ಯ ಇಲಾಖೆ ಈ ಸ್ಥಳದಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿತ್ತು. ಆದರೆ ಏಕಾಏಕಿ ಗಿಡಗಳ ಸುತ್ತಲೂ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದಾಗ, ಗಿಡ-ಮರಗಳನ್ನು ಕತ್ತರಿಸುವುದಿಲ್ಲ ಎಂದು ನಗರಸಭೆ ಅಧಿಕಾರಿಗಳು ಮೌಖಿಕ ಹೇಳಿಕೆ ನೀಡಿದ್ದರಂತೆ.
ಆದರೆ ಇದೀಗ ಸಿಸಿ ರಸ್ತೆ ನಿರ್ಮಾಣವಾಗುತ್ತಿದ್ದಂತೆಯೆ ರಸ್ತೆಯಲ್ಲಿರುವ ಮರಗಳನ್ನು ತೆರವು ಮಾಡಲು ಅನುಮತಿ ನೀಡಿ ಎಂದು ನಗರಸಭೆಯ ಅಧಿಕಾರಿಗಳು, ವಲಯ ಸಂರಕ್ಷಣಾ ಅಧಿಕಾರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಲೇಔಟ್ ಮ್ಯಾಪ್ ತಂದು ಉದ್ದೇಶಿತ ಸ್ಥಳದಲ್ಲಿ ರಸ್ತೆ ತೋರಿಸಿದರೆ ಮಾತ್ರ ಮರಗಳ ತೆರವಿಗೆ ಅನುಮತಿ ನೀಡುತ್ತೇವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು, ನಗರಸಭೆಗೆ ತಿಳಿಸಿದ್ದಾರೆ. ಇದೀಗ ಇಲ್ಲದ ರಸ್ತೆಗಾಗಿ ನಗರಸಭೆ ಮತ್ತು ಅರಣ್ಯ ಇಲಾಖೆಯ ಮಧ್ಯೆ ಹಗ್ಗಜಗ್ಗಾಟ ನಡೆದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೌರಾಯುಕ್ತ ಅರವಿಂದ್ ಜಮಖಂಡಿ, ಲೇಔಟ್ನಲ್ಲಿ ರಸ್ತೆ ಇದೆ. ಇದು ಬಹುತೇಕರಿಗೆ ಗೊತ್ತಿಲ್ಲ. ಅರಣ್ಯ ಇಲಾಖೆ ಒಂದು ಗಿಡದ ಬದಲಿಗೆ 10 ಗಿಡ ನೆಟ್ಟರಷ್ಟೇ ರಸ್ತೆಯಲ್ಲಿರುವ ಮರಗಳ ತೆರವಿಗೆ ಅವಕಾಶ ನೀಡುವುದಾಗಿ ಹೇಳಿದೆ. ಅದನ್ನು ಪಾಲಿಸಲಾಗುವುದು ಎಂದರು.