ಗಂಗಾವತಿ : ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಎರಡು ಕಾಲುಗಳನ್ನು ಕಳೆದುಕೊಂಡ ಘಟನೆ ತಾಲೂಕಿನ ಶ್ರೀರಾಮನಗರ ಸಮೀಪ ನಡೆದಿದೆ. ನಗರದಲ್ಲಿನ ನೆಂಟರ ಮನೆಗೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಜವಳಗೇರಾ ರುದ್ರೇಶ ಪಾಟೀಲ್ (38) ಎಂಬ ಯುವಕ ಬೈಕ್ನಲ್ಲಿ ಬರುತ್ತಿದ್ದ. ಈ ವೇಳೆ ಶ್ರೀರಾಮನಗರದ ಸಮೀಪ ಇರುವ ಬರಗೂರು ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ.
ಗಂಗಾವತಿಯಿಂದ ಕಾರಟಗಿಗೆ ಹೊರಟಿದ್ದ ಇಂಡಿಕಾ ಕಾರಿನ ಚಕ್ರ ರಸ್ತೆ ತಿರುವಿನಲ್ಲಿ ಪಂಚರ್ ಆಗಿದ್ದರಿಂದ, ಏಕಾಏಕಿ ನಿಯಂತ್ರಣ ತಪ್ಪಿದೆ. ಚಾಲಕನ ನಿಯಂತ್ರಣಕ್ಕೆ ಕಾರು ಸಿಗದೇ ಎದುರಿಗೆ ಬರುತ್ತಿದ್ದ ಬೈಕ್ ಮೇಲೆ ಹರಿದಿದೆ. ಇದರಿಂದ ಬೈಕ್ ಸವಾರನಿಗೆ ತೀವ್ರ ರಕ್ತಸ್ರಾವವಾಗಿ ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದು, ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಚಾಲಕ ಕಾರಟಗಿಯ ಖಾಸಗಿ ಶಾಲೆಯೊಂದರ ಮಾಲೀಕ ಎನ್ನಲಾಗಿದ್ದು, ಇದೀಗ ಕಾರು ಸ್ಥಳದಲ್ಲಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.